ADVERTISEMENT

ದೇಶಪ್ರೇಮದ ಪಾಠ, ದೇಶದ್ರೋಹಿಗಳಿಗೆ ಆಶ್ರಯ

ಐಎಸ್‌ಐ ಜತೆ ಬಿಜೆಪಿ ಕಾರ್ಯಕರ್ತರ ಸಂಪರ್ಕಕ್ಕೆ ಕಾಂಗ್ರೆಸ್‌ ಲೇವಡಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ನವದೆಹಲಿ: ಮಧ್ಯಪ್ರದೇಶದಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ಸಂಪರ್ಕ ಹೊಂದಿದ್ದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.
 
‘ಎಲ್ಲರಿಗೂ ದೇಶಪ್ರೇಮದ ಪ್ರಮಾಣ ಪತ್ರ ನೀಡುತ್ತಿದ್ದ ಪಕ್ಷವೇ ಈಗ, ದೇಶದ್ರೋಹಿಗಳಿಗೆ ಆಶ್ರಯ ನೀಡಿ ಸಿಕ್ಕಿಬಿದ್ದಿದೆ. ಒಂದೆಡೆ ದೇಶಪ್ರೇಮದ ಪಾಠ, ಮತ್ತೊಂದೆಡೆ ದೇಶದ್ರೋಹಿಗಳಿಗೆ ಆಶ್ರಯ’ ಎಂದು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಲೇವಡಿ ಮಾಡಿದ್ದಾರೆ.
 
‘ಮಧ್ಯಪ್ರದೇಶದಲ್ಲಿ ಈಗ ಅಧಿಕಾರದಲ್ಲಿರುವ ಬಿಜೆಪಿಯ ಕಾರ್ಯಕರ್ತರೇ, ಐಎಸ್‌ಐಗೆ ಮಹತ್ವದ ಮಾಹಿತಿಗಳನ್ನು ಬಿಟ್ಟುಕೊಟ್ಟಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
 
‘ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭರವಸೆ ನೀಡಿತ್ತು. ಆದರೆ ಅದಕ್ಕೆ ಬದ್ಧವಾಗಿರುವಲ್ಲಿ ಬಿಜೆಪಿ ವಿಫಲವಾಗುತ್ತಿದೆ. ಕಾನ್ಪುರ ರೈಲು ಅಪಘಾತದಲ್ಲಿ ಐಎಸ್‌ಐ ಕೈವಾಡ ಇರುವುದು, ಗುಪ್ತಚರ ಇಲಾಖೆಯ ವೈಫಲ್ಯಕ್ಕೆ ಸ್ಪಷ್ಟ ನಿದರ್ಶನ’ ಎಂದು ಅವರು ಹೇಳಿದ್ದಾರೆ.
 
ಸುಪ್ರೀಂ ಕೋರ್ಟ್‌ ಉಸ್ತುವಾರಿಯಲ್ಲಿ ಸಿಬಿಐ ಈ ಪ್ರಕರಣದ ತನಿಖೆ ನಡೆಸಬೇಕು ಎಂದು ಎಎಪಿ ಸಹ ಆಗ್ರಹಿಸಿದೆ.
 
**
ಐ.ಟಿ ಘಟಕದ ಮುಖ್ಯಸ್ಥನೇ ಆರೋಪಿ
ಐಎಸ್ಐಗೆ ಭಾರತೀಯ ಸೇನೆ ಕುರಿತ ಮಾಹಿತಿ ನೀಡಲು ದೂರವಾಣಿ ಸಂಪರ್ಕ ಜಾಲ ನಡೆಸುತ್ತಿದ್ದ 11 ಮಂದಿಯನ್ನು ಮಧ್ಯಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಫೆಬ್ರುವರಿ 8ರಂದು ಬಂಧಿಸಿತ್ತು. ಅವರಲ್ಲಿ ಮೂವರು ಮಧ್ಯಪ್ರದೇಶ ಬಿಜೆಪಿ ಘಟಕದ ಸಕ್ರಿಯ ಕಾರ್ಯಕರ್ತರು ಎಂದು ಮೂಲಗಳು ತಿಳಿಸಿದ್ದವು.
 
ಬಂಧಿತರಿಂದ 3 ಸಾವಿರ ಸಿಮ್‌ ಕಾರ್ಡ್‌ಗಳು, 50 ಮೊಬೈಲ್‌ಗಳು ಮತ್ತು ಕೆಲವು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. 
 
‘ಬಂಧಿತರಲ್ಲಿ ಒಬ್ಬ ಆರೋಪಿ ಮಧ್ಯಪ್ರದೇಶ ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ. ಆತನ ಬಳಿ ಪಕ್ಷದ ಎಲ್ಲಾ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳು ಇದ್ದವು. ಆತನಿಗೆ ಐಎಸ್‌ಐ ಜತೆ ಸಂಪರ್ಕ ಇದ್ದರೆ ಅದು ತೀರಾ ಅಪಾಯಕಾರಿ ಸಂಗತಿ. ಇಂತಹ ಬೆಳವಣಿಗೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಬಿಜೆಪಿಯ ಶಾಸಕರೊಬ್ಬರು ಹೇಳಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.