ADVERTISEMENT

ನಾಗಪುರದಲ್ಲಿ ನೇಣು ಮುಂಬೈನಲ್ಲಿ ಮಣ್ಣು

ಯಾಕೂಬ್‌ ಕೊನೆಯ ಕ್ಷಣದ ಕಾನೂನು ಹೋರಾಟ ವಿಫಲ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ನಾಗಪುರ/ಮುಂಬೈ(ಪಿಟಿ): 1993ರ ಮುಂಬೈ ಸರಣಿಸ್ಫೋಟದ ಅಪರಾಧಿ ಯಾಕೂಬ್‌ ಮೆಮನ್‌ನನ್ನು ಗುರುವಾರ ಬೆಳಿಗ್ಗೆ ನಾಗಪುರದ ಕೇಂದ್ರ ಕಾರಾಗೃಹದಲ್ಲಿ ನೇಣಿಗೇರಿಸಲಾಯಿತು.‌

ಯಾಕೂಬ್‌ನನ್ನು ಉಳಿಸಿಕೊಳ್ಳುವುದಕ್ಕಾಗಿ ಆತನ ವಕೀಲರು ಕೊನೆಯ ಕ್ಷಣದಲ್ಲಿ ಮಾಡಿದ ಪ್ರಯತ್ನ ಕೈಗೂಡಲಿಲ್ಲ. ಟಾಡಾ ಕೋರ್ಟ್‌್ ಆದೇಶದಂತೆಯೇ ಗುರುವಾರ ಬೆಳಿಗ್ಗೆ 6.35ಕ್ಕೆ  ಆತನ ಕೊರಳಿಗೆ ನೇಣು ಬಿತ್ತು.

ಜನ್ಮದಿನದಂದೇ ನೇಣಿಗೆ: 7.01ಕ್ಕೆ ವೈದ್ಯರು ಆತನ ಮರಣವನ್ನು ಘೋಷಿಸಿದರು. ಕಾಕತಾಳೀಯ ಎಂಬಂತೆ ಯಾಕೂಬ್‌ 54 ವರ್ಷಕ್ಕೆ ಕಾಲಿಟ್ಟ ದಿನವೇ ನೇಣುಗಂಬಕ್ಕೆ ಏರಿದ. ಜೈಲು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.  ಮುಂಬೈಗೆ ತರಲಾದ ಶವದ ಮೆರವಣಿಗೆ ನಡೆಸಲು  ಪೊಲೀಸರು ಕುಟುಂಬಕ್ಕೆ  ಅವಕಾಶ ನೀಡಲಿಲ್ಲ.

ಅಂತ್ಯಕ್ರಿಯೆ: ಮರೀನ್‌ ಲೈನ್ಸ್‌ನಲ್ಲಿರುವ ಬಡಾ ಖಬರಸ್ಥಾನದಲ್ಲಿ  ತಂದೆ ತಾಯಿ ಸಮಾಧಿಯ ಬಳಿಯಲ್ಲಿಯೇ ಯಾಕೂಬ್‌ ದೇಹವನ್ನು

ಸಂಜೆ 5.30ಕ್ಕೆ ಮಣ್ಣು ಮಾಡಲಾಯಿತು.  ಯಾಕೂಬ್‌ ಕುಟುಂಬ ವಾಸವಾಗಿರುವ ಮಾಹಿಮ್‌ ಪ್ರದೇಶ ಸೇರಿಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ 400ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಜೈಲು ನಿಯಮಾವಳಿ ಪ್ರಕಾರ, ಗಲ್ಲಿಗೇರಿದ ವ್ಯಕ್ತಿಯ ದೇಹವನ್ನು ಆತನ ಕುಟುಂಬಕ್ಕೆ ಹಸ್ತಾಂತರಿಸಲು ಅವಕಾಶವಿಲ್ಲ. ಆದರೆ,  ಯಾಕೂಬ್‌ ದೇಹವನ್ನು ಹಸ್ತಾಂತರಿಸುವಂತೆ ಕೋರಿ ಬುಧವಾರ ರಾತ್ರಿಯೇ ಯಾಕೂಬ್‌ ಅಣ್ಣ ಸುಲೇಮಾನ್‌ ಅವರು ಜೈಲು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.

ಈಡೇರದ ಆಸೆ
ಯಾಕೂಬ್‌ ಮೆಮನ್‌ ನೇಣಿಗೇರುವ ಮುನ್ನ ತನ್ನ 21 ವರ್ಷದ ಮಗಳು ಜುಬೇದಾಳನ್ನು ನೋಡಲು ಬಯಸಿದ್ದ. ಆದರೆ ಅದು ಈಡೇರಲೇ ಇಲ್ಲ.  ಜೈಲು  ಅಧಿಕಾರಿಗಳು ಬುಧವಾರ ರಾತ್ರಿ ದೂರವಾಣಿ ಮೂಲಕ ಆತ ತನ್ನ ಮಗಳೊಂದಿಗೆ ಮಾತನಾಡುವುದಕ್ಕೆ ವ್ಯವಸ್ಥೆ ಮಾಡಿದ್ದರು.

ADVERTISEMENT

ಸಹೋದರ ಸುಲೇಮಾನ್‌ ಅವರನ್ನು ಭೇಟಿಯಾದಾಗ ಯಾಕೂಬ್‌್ ಭಾವೋದ್ವೇಗಕ್ಕೆ ಒಳಗಾಗಿದ್ದ.  ಪತ್ನಿ ರಹೀನ್‌ (42) ಹಾಗೂ ಪುತ್ರಿ ಜುಬೇದಾಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕೇಳಿಕೊಂಡಿದ್ದ.  ಅಲ್ಲದೇ ಕುಟುಂಬದ ಇತರರ ಬಗ್ಗೆಯೂ ವಿಚಾರಿಸಿಕೊಂಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.