ADVERTISEMENT

‘ನೀರಾವರಿ ಆಯೋಗದ ವರದಿಗೂ ನಿರ್ಲಕ್ಷ್ಯ’

ಕಾವೇರಿ:‘ಸುಪ್ರಿಂ’ನಲ್ಲಿ ರಾಜ್ಯದ ವಾದ

ಪಿಟಿಐ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
‘ನೀರಾವರಿ ಆಯೋಗದ ವರದಿಗೂ ನಿರ್ಲಕ್ಷ್ಯ’
‘ನೀರಾವರಿ ಆಯೋಗದ ವರದಿಗೂ ನಿರ್ಲಕ್ಷ್ಯ’   

ನವದೆಹಲಿ: ಸ್ವಾತಂತ್ರ್ಯಪೂರ್ವ ಅವಧಿಯಲ್ಲಿ ನೀರಾವರಿ ಆಯೋಗವು ಬರಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿ ಸಲ್ಲಿಸಲಾದ ವರದಿಯನ್ವಯ ರಾಜ್ಯದ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿಲ್ಲ ಎಂದು ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ತಿಳಿಸಿತು.

ಕಾವೇರಿ ಜಲವಿವಾದ ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ಕಣಿವೆ ರಾಜ್ಯಗಳು ಸಲ್ಲಿಸಿರುವ ಸಿವಿಲ್‌ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದೆದುರು ಬುಧವಾರ ರಾಜ್ಯದ ಪರ ವಕೀಲರಾದ ಮೋಹನ್‌ ಕಾತರಕಿ ಹಾಗೂ ಶ್ಯಾಂ ದಿವಾನ್‌ ವಾದ ಮಂಡಿಸಿ ಈ ವಿಷಯ ಪ್ರಸ್ತಾಪಿಸಿದರು.

1924ರಲ್ಲಿ ಮದ್ರಾಸ್‌ ಹಾಗೂ ಮೈಸೂರು ಸರ್ಕಾರಗಳ ನಡುವೆ ಕಾವೇರಿ ಒಪ್ಪಂದ ಮಾಡಿಕೊಂಡ ಸಂದರ್ಭ ನೀರಾವರಿ ಆಯೋಗ ರಚಿಸಿ ಬರಪೀಡಿತ ಪ್ರದೇಶಗಳ ವಿವರ ನೀಡುವಂತೆ ಕೋರಲಾಗಿತ್ತು. ಆದರೆ ಆಯೋಗ ಶಿಫಾರಸು ಮಾಡಿದಂತೆ ರಾಜ್ಯದ ಭೂಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಗಿಲ್ಲ.

ADVERTISEMENT

ಕಾವೇರಿ ಹಾಗೂ ಅದರ ಉಪ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಕಬಿನಿ, ಅರ್ಕಾವತಿ, ಸುವರ್ಣವತಿ ನದಿಗಳಿದ್ದರೂ ಒಣ ಭೂಮಿಯನ್ನು ನೀರಾವರಿ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಿರಲಿಲ್ಲ ಎಂದು ಮೋಹನ್‌ ಕಾತರಕಿ ವಿವರಿಸಿದರು.

ಒಪ್ಪಂದ ಮಾಡಿಕೊಳ್ಳಲಾದ ಕಾಲದಲ್ಲಿದ್ದ ಸ್ಥಿತಿಗೂ, ಪ್ರಸ್ತುತ ಸ್ಥಿತಿಗತಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಹಿರಿಯ ವಕೀಲ ಫಾಲಿ ನಾರಿಮನ್‌ ವಿವರಿಸಿದರು.

ಜೂನ್‌ನಿಂದ ಏಪ್ರಿಲ್‌ವರೆಗೆ ಸತತವಾಗಿ ತಮಿಳುನಾಡಿಗೆ ಒಟ್ಟು 192 ಟಿಎಂಸಿ ಅಡಿ ನೀರನ್ನು ಹರಿಸಬೇಕೆಂಬ ನ್ಯಾಯಮಂಡಳಿಯ ತೀರ್ಪು ಅವೈಜ್ಞಾನಿಕ ಎಂದು ಶ್ಯಾಂ ದಿವಾನ್‌ ಹೇಳಿದರು. ಸಿವಿಲ್‌ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕದ ವಾದ ಮಂಡನೆಯು ಅಂತಿಮ ಹಂತಕ್ಕೆ ಬಂದಿದ್ದು, ಗುರುವಾರವೂ ರಾಜ್ಯದ ವಾದ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.