ADVERTISEMENT

ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್‌ಗೆ ಪಾಕಿಸ್ತಾನದಲ್ಲಿ ಮರಣದಂಡನೆ

ಏಜೆನ್ಸೀಸ್
Published 10 ಏಪ್ರಿಲ್ 2017, 10:54 IST
Last Updated 10 ಏಪ್ರಿಲ್ 2017, 10:54 IST
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್   

ನವದೆಹಲಿ: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

ಜಾಧವ್ ಅವರನ್ನು ಭಾರತದ ಬೇಹುಗಾರಿಕಾ ಸಂಸ್ಥೆ ‘ರಾ’ದ ಏಜೆಂಟ್ ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕಿಸ್ತಾನದಲ್ಲಿ ವಿಧ್ವಸಂಕ ಕೃತ್ಯಗಳನ್ನೆಸಗಲು ಸಂಚು ರೂಪಿಸಿದ್ದಕ್ಕಾಗಿ ಅವರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಅಲ್ಲಿನ ಸೇನೆಯ ಸಾರ್ವಜನಿಕ ಸಂಪರ್ಕ ಇಲಾಖೆ ‘ಇಂಟರ್‌ ಸರ್ವೀಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‌ಪಿಆರ್) ತಿಳಿಸಿದೆ.

ಜಾಧವ್ ಅವರನ್ನು 2016ರ ಮಾರ್ಚ್ 3ರಂದು ಬಲೂಚಿಸ್ತಾನದಲ್ಲಿ ಬಂಧಿಸಲಾಗಿತ್ತು. ನಂತರ, ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವುದಾಗಿ ಜಾಧವ್ ಹೇಳಿಕೆ ನೀಡಿರುವ ‘ತಪ್ಪೊಪ್ಪಿಗೆ ವಿಡಿಯೊ’ವನ್ನು ಪಾಕಿಸ್ತಾನದ ಸೇನೆ ಬಿಡುಗಡೆ ಮಾಡಿತ್ತು.

ADVERTISEMENT

ಜಾಧವ್ ಅವರು ನೌಕಾಪಡೆಯ ನಿವೃತ್ತ ಅಧಿಕಾರಿ ಎಂಬುದನ್ನು ಭಾರತ ದೃಡಪಡಿಸಿತ್ತು. ಆದರೆ, ಸದ್ಯ ಸರ್ಕಾರದೊಂದಿಗೆ ಅವರಿಗೆ ಯಾವುದೇ ಸಂಪರ್ಕ ಇಲ್ಲ ಎಂದೂ ಹೇಳಿತ್ತು.

ಸಾಕ್ಷ್ಯ ನಾಶಕ್ಕೆ ಸಂಚು: ಪಾಕಿಸ್ತಾನದ ಸೇನಾ ನ್ಯಾಯಾಲಯದಲ್ಲಿ ರಹಸ್ಯ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಲಾಗಿದೆ. ಈ ಬಗ್ಗೆ ಭಾರತ ಸರ್ಕಾರಕ್ಕೆ ಪಾಕಿಸ್ತಾನ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ರಹಸ್ಯ ವಿಚಾರಣೆ ನಡೆಸುವ ಬದಲು ಮುಕ್ತ ವಿಚಾರಣೆ ನಡೆಸಬೇಕಿತ್ತು. ಪಾಕಿಸ್ತಾನದ ಈ ನಡೆಯಿಂದ ಸಾಕ್ಷ್ಯ ನಾಶಪಡಿಸಲು ಅದು ಮುಂದಾಗಿರುವ ಅನುಮಾನ ವ್ಯಕ್ತವಾಗಿದೆ ಎಂದು ಮೂಲಗಳು ಹೇಳಿವೆ. ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರ ಸಲಹೆಗಾರ ಸರ್ತಾಜ್ ಅಜೀಜ್ ಅವರು ಜಾಧವ್ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಕೆಲ ತಿಂಗಳ ಹಿಂದೆ ಹೇಳಿದ್ದರು. ನಂತರ ಪಾಕಿಸ್ತಾನದ ಸೇನಾ ನ್ಯಾಯಾಲಯ ರಹಸ್ಯ ವಿಚಾರಣೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.