ADVERTISEMENT

ಪಕ್ಷ ತೊರೆದ ವಾಸನ್‌

ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2014, 19:30 IST
Last Updated 3 ನವೆಂಬರ್ 2014, 19:30 IST

ಚೆನ್ನೈ (ಪಿಟಿಐ): ತಮಿಳುನಾಡಿನ ಹಿರಿಯ ಕಾಂಗ್ರೆಸ್‌ ನಾಯಕ ಜಿ.ಕೆ. ವಾಸನ್‌ ಸೋಮವಾರ ಕಾಂಗ್ರೆಸ್‌ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

ಶೀಘ್ರದಲ್ಲಿಯೇ ತಿರುಚ್ಚಿಯಲ್ಲಿ ನಡೆಯಲಿರುವ ರ್‍್ಯಾಲಿಯಲ್ಲಿ  ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಬಹಿರಂಗಪಡಿಸುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಲೋಕಸಭೆಯ ಚುನಾವಣೆಯ ನಂತರ ಹಿನ್ನಡೆ ಅನುಭವಿಸುತ್ತಿರುವ ಕಾಂಗ್ರೆಸ್‌ಗೆ ವಾಸನ್‌ ನಿರ್ಗಮನದಿಂದ  ತಮಿಳುನಾಡಿನಲ್ಲಿ ಮತ್ತೊಂದು ಬಲವಾದ ಪೆಟ್ಟು ಬಿದ್ದಿದೆ.

ತಮಿಳುನಾಡಿನಲ್ಲಿ ಕಾಂಗ್ರೆಸ್‌ ಬಲಪಡಿಸಲು ಎಐಸಿಸಿ  ತಲೆಕೆಡಿಸಿಕೊಳ್ಳದ ಕಾರಣ ಬೇಸತ್ತು ಪಕ್ಷ ತೊರೆಯುತ್ತಿರುವುದಾಗಿ ಅವರು ತಿಳಿಸಿದರು. ಹೊಸ ಪಕ್ಷ ಸ್ಥಾಪಿಸುವ ಮೂಲಕ ರಾಜ್ಯದಲ್ಲಿ ಕಾಮರಾಜ್‌ ಆಡಳಿತವನ್ನು ಮರಳಿ ತರುವುದಾಗಿ ಅವರು ಭರವಸೆ ನೀಡಿದರು.

17 ವರ್ಷಗಳ ಹಿಂದೆ (1996ರಲ್ಲಿ) ವಾಸನ್‌ ಅವರ ತಂದೆ ಹಾಗೂ ಪ್ರಸಿದ್ಧ ರಾಜಕಾರಣಿ  ಜಿ.ಕೆ. ಮೂಪನಾರ್‌ ಕೂಡ ಕಾಂಗ್ರೆಸ್‌ ತೊರೆದು ತಮಿಳು ಮನಿಲಾ ಕಾಂಗ್ರೆಸ್ ಎಂಬ ಹೊಸ ಪ್ರಾದೇಶಿಕ ಪಕ್ಷವನ್ನು ಕಟ್ಟಿದ್ದರು. ಮೂಪನಾರ್‌ ನಿಧನದ ನಂತರ ಪಕ್ಷದ ಚುಕ್ಕಾಣಿ ಹಿಡಿದಿದ್ದ ವಾಸನ್‌ 14 ವರ್ಷಗಳ ಹಿಂದೆ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದ್ದರು.

ಕಾಂಗ್ರೆಸ್‌ಗೆ ಇತ್ತೀಚೆಗೆ  ರಾಜೀನಾಮೆ ಸಲ್ಲಿಸಿದ್ದ ತಮಿಳುನಾಡು ಪ್ರದೇಶ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಬಿ.ಎಸ್‌. ಜ್ಞಾನದೇಸಿಕನ್‌ ಕೂಡ ವಾಸನ್‌ ಜತೆ ಗುರುತಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT