ADVERTISEMENT

ಪತಿ ವಿರುದ್ಧ ಕುಮ್ಮಕ್ಕು ಪ್ರಕರಣ ಅಸಾಧ್ಯ

ಮನೆಗೆಲಸ ಮಾಡದ ಕಾರಣಕ್ಕೆ ಬೈಯ್ಗುಳ: ಪತ್ನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2014, 19:30 IST
Last Updated 8 ಅಕ್ಟೋಬರ್ 2014, 19:30 IST

ಮಧುರೆ (ಪಿಟಿಐ): ಮನೆಗೆಲಸ ಸಮರ್ಪಕವಾಗಿ ಮಾಡದ ಕಾರಣಕ್ಕೆ ಪತಿ ಥಳಿಸಿ, ಆ ಕಾರಣಕ್ಕೆ ‘ಅತಿ ಸೂಕ್ಷ್ಮ’ ಮನೋಭಾವದ ಪತ್ನಿ ಆತ್ಮಹತ್ಯೆ ಮಾಡಿ­ಕೊಂಡರೆ ಪತಿಯ ವಿರುದ್ಧ ‘ಆತ್ಮಹತ್ಯೆಗೆ ಕುಮ್ಮಕ್ಕು’ ಪ್ರಕರಣ ದಾಖಲಿಸಿಕೊಳ್ಳುವಂತಿಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.

ಮನೆಗೆಲಸಗಳನ್ನು ಸಮರ್ಪಕವಾಗಿ ಮಾಡದ ಅತಿ ಸೂಕ್ಷ್ಮ ಪ್ರವೃತ್ತಿಯ ಪತ್ನಿಯನ್ನು ಅದೇ ಕಾರಣಕ್ಕೆ ಬೈಯ್ದು, ಹೊಡೆದು ದೌರ್ಜನ್ಯ ನಡೆಸಿದ್ದ ಕೆ. ಓಬುಲಿರಾಜ್‌ ಎಂಬಾತನಿಗೆ ಇಲ್ಲಿನ ಕೆಳ ನ್ಯಾಯಾಲಯ ಶಿಕ್ಷೆ ಸಹಿತ ದಂಡವನ್ನು ವಿಧಿಸಿ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ  ಓಬುಲಿರಾಜ್‌ ಮಧುರೆ ಹೈಕೋರ್ಟ್‌ ವಿಭಾಗೀಯ ಪೀಠದ ಮೆಟ್ಟಿಲೇರಿದ್ದ.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ವೇಣು­ಗೋಪಾಲ್‌ ಅವರು ಪತ್ನಿ ಅತಿಸೂಕ್ಷ್ಮ ಪ್ರವೃತ್ತಿಯವಳಾಗಿದ್ದ ಕಾರಣ  ಆಕೆಯ ಆತ್ಮಹತ್ಯೆಗೆ ಪತಿ ಕುಮ್ಮಕ್ಕು ನೀಡಿದಂತಾಗುವುದಿಲ್ಲ ಎಂದು ತೀರ್ಪು ನೀಡಿದರು. ಅಲ್ಲದೆ ಆಪಾದಿತನಿಗೆ ಕೆಳ­ನ್ಯಾಯಾಲಯ ವಿಧಿಸಿರುವ ದಂಡವನ್ನು ಮರು­ಪಾವತಿಸುವಂತೆಯೂ ಆದೇಶಿಸಿದರು.

ಮಹಿಳಾ ನ್ಯಾಯಾಲಯವು ಆಪಾದಿತನಿಗೆ ಮೂರು ವರ್ಷದ ಕಠಿಣ ಶಿಕ್ಷೆಯನ್ನೂ ವಿಧಿಸಿತ್ತು. ಆತ್ಮಹತ್ಯೆಗೆ ಕುಮ್ಮಕ್ಕು ಪ್ರಕರಣ ದಾಖಲಿಸಲು ಪ್ರತ್ಯಕ್ಷವಾದ ಸಾಕ್ಷಿ ಬೇಕು ಇಲ್ಲವೇ ಪರೋಕ್ಷವಾದ ನಡೆ ಸ್ಪಷ್ಟವಾಗಿ ಇರಬೇಕು. ಪತ್ನಿಯನ್ನು  ಮನೆ ಸ್ವಚ್ಛಗೊಳಿಸದ ಕಾರಣಕ್ಕೆ ಕೇವಲ ಬೈಯ್ದು ಕ್ರೂರವಾಗಿ ನಡೆಸಿಕೊಂಡಿರುವುದು ಸಾಲದು’ ಎಂದೂ ನ್ಯಾಯಮೂರ್ತಿ ವೇಣುಗೋಪಾಲ್‌ ಅವರು ತಿಳಿಸಿದರು.

ಕಂದಾಯ ವಿಭಾಗೀಯ ಅಧಿಕಾರಿ (ಆರ್‌ಡಿಒ) ಅರ್ಜಿದಾರನ ಪತ್ನಿಯ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿದ್ದರು.    ‘ಆಕೆಯ ಸಾವಿಗೆ ವರದಕ್ಷಿಣೆ ದೌರ್ಜನ್ಯ ಕಾರಣವಲ್ಲ. ಭಾರತೀಯ ದಂಡಸಂಹಿತೆ 498ಎಯಲ್ಲಿ ವಿವರಿಸಿರುವ ಪ್ರಕಾರ, ಆಕೆಯನ್ನು ಕ್ರೂರವಾಗಿ ಹಿಂಸಿಸಿರುವುದಕ್ಕೆ ಯಾವುದೇ ಪುರಾವೆಯಿಲ್ಲ’ ಎಂದು, ಅರ್ಜಿದಾರನ ಪರವಾಗಿ ಈ ಅಧಿಕಾರಿ ವರದಿ ನೀಡಿದ್ದರು.

ಹೆಣ್ಣಿನ ವಿವಾಹ ವಯಸ್ಸು ಏರಿಕೆಗೆ ಒಲವು
ಮಧುರೆ (ಪಿಟಿಐ): ಹೆಣ್ಣು ಮಕ್ಕಳ ಮದುವೆಯ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿ­ಸುವ ನಿಟ್ಟಿನಲ್ಲಿ 1875ರ ಭಾರತೀಯ ಪ್ರೌಢ ವಯಸ್ಸು ಕಾಯ್ದೆ ಮತ್ತು ಬಾಲ್ಯ ವಿವಾಹ ಪ್ರತಿಬಂಧಕ ಕಾಯ್ದೆಗೆ ತಿದ್ದುಪಡಿ ತರುವುದು ಅಗತ್ಯ ಎಂದು ಮದ್ರಾಸ್‌ ಹೈಕೋರ್ಟ್‌ ಬುಧವಾರ ಹೇಳಿದೆ.

ಎಸ್.ಮಣಿಕುಮಾರ್‌ ಮತ್ತು ವಿ.ಎಸ್. ರವಿ ಅವರನ್ನೊಳಗೊಂಡ ವಿಭಾಗೀಯ ನ್ಯಾಯ­ಪೀಠವು, ‘ಪುರುಷರಿಗೆ ವಿವಾಹದ ವಯಸ್ಸು 21 ವರ್ಷ ಎಂದು ನಿಗದಿಪಡಿಸ­ಲಾಗಿದೆ. ಆದರೆ ಹೆಣ್ಣು ಮಕ್ಕಳಿಗೆ 18 ವರ್ಷಕ್ಕೆ ಮದುವೆ ಆಗುವು­ದಕ್ಕೆ ಅವಕಾಶ ಇದೆ. ಆದರೆ ಹುಡುಗರು ಮತ್ತು ಹುಡುಗಿ­ಯರು 17ನೇ ವಯಸ್ಸಿನವರೆಗೂ ಶಾಲೆಯ ವಾತಾವರಣದಲ್ಲಿರುತ್ತಾರೆ. ಹಾಗಿರು­ವಾಗ 18ನೇ ವಯಸ್ಸಿನಲ್ಲಿ ಹುಡುಗಿಯರು ಹುಡುಗರಿಗಿಂತ ಹೇಗೆ ಹೆಚ್ಚು ಪ್ರೌಢರಾಗುತ್ತಾರೆ ಎಂದು ಪ್ರಶ್ನಿಸಿದೆ.

ಹಿಂದೂ ವಿವಾಹ ಕಾಯ್ದೆ ಪ್ರಕಾರ ಪುರುಷರು 21 ವರ್ಷಕ್ಕೆ ಮದುವೆ­ಯಾಗ­ಬಹುದು. ಅದೇ ಕಾಯ್ದೆ ಪ್ರಕಾರ ಹೆಣ್ಣು ಮಕ್ಕಳು 18 ವರ್ಷಕ್ಕೆ ಮದುವೆ­ಯಾಗಬಹುದು. ಆದರೆ 18 ವರ್ಷಕ್ಕೆ ಹೆಣ್ಣು ಮಕ್ಕಳು ಸಾಮಾಜಿಕ, ಮಾನಸಿಕ ಪ್ರಬುದ್ಧತೆ ಪಡೆದು­ಕೊಂಡು ಮದುವೆಗೆ ಹೇಗೆ ಸಿದ್ಧ­­ವಾಗುತ್ತಾರೆ ಎಂದು ಪೀಠ ಆಶ್ಚರ್ಯ ವ್ಯಕ್ತಪಡಿಸಿದೆ. 

ಹೆಚ್ಚುತ್ತಿರುವ ಹೇಬಿಯಸ್‌ ಕಾರ್ಪಸ್‌
ಹೆಣ್ಣು­ಮಕ್ಕಳು 18ನೇ ವಯಸ್ಸಿನಲ್ಲಿ ಹುಡುಗ­ರೊಂದಿಗೆ ಓಡಿಹೋಗುವ ಸಂಬಂಧ ಹೈಕೋರ್ಟ್‌­­ನಲ್ಲಿ ಅಸಂಖ್ಯಾತ ಹೇಬಿಯಸ್‌ ಕಾರ್ಪಸ್‌ ಅರ್ಜಿಗಳು ದಾಖಲಾಗುತ್ತಿವೆ. ಯಾವುದೇ ತಂದೆ ತಾಯಿ ತಮ್ಮ ಮಗಳು ತನ್ನಿಷ್ಟದ ಹುಡುಗ­ನೊಂದಿಗೆ ಓಡಿಹೋಗಿ ತಮ್ಮ ಅನುಪಸ್ಥಿತಿಯಲ್ಲಿ ವಿವಾಹವಾಗುವುದನ್ನು ಇಚ್ಛಿಸುವುದಿಲ್ಲ ಎಂದೂ ಪೀಠ ಅಭಿ­ಪ್ರಾಯಪಟ್ಟಿದೆ.

ಆರ್. ತ್ಯಾಗರಾಜನ್‌ ಎಂಬವರು ಸಲ್ಲಿಸಿದ ಹೇಬಿಯಸ್‌ ಕಾರ್ಪಸ್ ಅರ್ಜಿಯ ವಿಚಾರ­ಣೆಯ ಸಂದರ್ಭ­ದಲ್ಲಿ ಪೀಠ ಹೀಗೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT