ADVERTISEMENT

ಪಾಕ್‌ಗೆ ಎಫ್‌–16: ತಕರಾರು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2016, 19:30 IST
Last Updated 13 ಫೆಬ್ರುವರಿ 2016, 19:30 IST
ಪಾಕ್‌ಗೆ ಎಫ್‌–16: ತಕರಾರು
ಪಾಕ್‌ಗೆ ಎಫ್‌–16: ತಕರಾರು   

ನವದೆಹಲಿ/ ವಾಷಿಂಗ್ಟನ್‌ (ಪಿಟಿಐ): ಪಾಕಿಸ್ತಾನಕ್ಕೆ ಎಫ್‌–16 ಯುದ್ಧ ವಿಮಾನಗಳನ್ನು ಮಾರಾಟ ಮಾಡುವ  ಅಮೆರಿಕದ ತೀರ್ಮಾನವನ್ನು ಭಾರತ ತೀವ್ರವಾಗಿ ವಿರೋಧಿಸಿದೆ.

ಭಾರತದಲ್ಲಿನ ಅಮೆರಿಕದ ರಾಯಭಾರಿ ರಿಚರ್ಡ್‌ ವರ್ಮಾ ಅವರನ್ನು ಶನಿವಾರ ವಿದೇಶಾಂಗ ಸಚಿವಾಲಯಕ್ಕೆ ಕರೆಸಿಕೊಂಡು ಪ್ರತಿಭಟನೆ ಸಲ್ಲಿಸಿದೆ.
‘ಅಮೆರಿಕದ ನಿರ್ಧಾರದಿಂದ ನಮಗೆ ಬೇಸರವಾಗಿದೆ’ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್ ಅವರು ವರ್ಮಾ ಅವರಿಗೆ ತಿಳಿಸಿದ್ದಾರೆ.

‘ಪಾಕ್‌ಗೆ ನೀಡಿರುವ ಸೇನಾ ನೆರವನ್ನು ಆ ದೇಶವು ಭಾರತ ವಿರುದ್ಧದ ಚಟುವಟಿಕೆಗಳಿಗೆ ಬಳಸುವ ಸಾಧ್ಯತೆಯಿದೆ’ ಎಂದು  ಅವರು  ಅಮೆರಿಕದ ರಾಯಭಾರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

‘ಎಫ್‌–16 ಯುದ್ಧ ವಿಮಾನಗಳ ಮಾರಾಟಕ್ಕೆ ಒಬಾಮ ಸರ್ಕಾರ ನಿರ್ಧರಿಸಿರುವುದು ಕಳವಳ ಉಂಟುಮಾಡಿದೆ. ಪಾಕಿಸ್ತಾನವು ಈ ವಿಮಾನಗಳನ್ನು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬಳಸಲಿದೆ ಎಂಬ ಅಮೆರಿಕದ ನಿಲುವನ್ನು ನಾವು ಒಪ್ಪಿಕೊಳ್ಳುವುದಿಲ್ಲ’ ಎಂದು ವಿದೇಶಾಂಗ ಸಚಿವಾಲಯ ಶನಿವಾರ ದೆಹಲಿಯಲ್ಲಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.

‘ಪಾಕಿಸ್ತಾನವು ಗಡಿಯಾಚೆಯಿಂದ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ. ಈ ಹಿಂದಿನ ವರ್ಷಗಳಲ್ಲಿ ನಡೆದಿರುವ ಘಟನೆಗಳೇ ಇದಕ್ಕೆ ಸಾಕ್ಷಿ’  ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.