ADVERTISEMENT

ಪಾಕ್‌ ಭಯೋತ್ಪಾದನೆ: ಕಳವಳ

ಬಿಜೆಪಿ– ಆರ್‌ಎಸ್‌ಎಸ್‌ ನಾಯಕರ ಸಭೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಬೆಂಬಲದಿಂದಾಗಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚುತ್ತಿರುವುದು, ಕಾಶ್ಮೀರಿ ಮತ್ತು ಹಿಂದೂ ವಲಸೆಗಾರರ ಪುನರ್ವಸತಿ ಹಾಗೂ ನಕ್ಸಲ್‌ ಸಮಸ್ಯೆ ಬಗ್ಗೆ ಆರ್‌ಎಸ್ಎಸ್‌ ಸಮನ್ವಯ ಸಭೆಯಲ್ಲಿ ಕಳವಳ ವ್ಯಕ್ತವಾಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ಎದುರಿಸುತ್ತಿರುವ ಭದ್ರತಾ ಸವಾಲುಗಳ ಬಗ್ಗೆ, ನಾಗಾ ಪ್ರತ್ಯೇಕತಾವಾದಿಗಳ ಜತೆ ಮಾಡಿಕೊಂಡ ಒಪ್ಪಂದದ ಬಗ್ಗೆಯೂ ರಾಜನಾಥ್‌ ಸಿಂಗ್‌ ವಿವರಿಸಿದರು. ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್, ದೇಶದ ಸುರಕ್ಷತೆ ಹಾಗೂ ಕದನ ವಿರಾಮ ಉಲ್ಲಂಘನೆಗೆ ಪ್ರತಿಯಾಗಿ ತಾವು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ವಿವರಿಸಿದರು.

ಸಿಂಗ್‌ ಹಾಗೂ ಪರಿಕ್ಕರ್‌ ಹೊರತಾಗಿ ಸಚಿವರಾದ ಸ್ಮೃತಿ ಇರಾನಿ, ಅನಂತ್‌ಕುಮಾರ್‌, ಜೆ.ಪಿ. ನಡ್ಡಾ, ಟಿ.ಸಿ. ಗೆಹ್ಲೋಟ್‌, ಬಿಜೆಪಿ ಅಧ್ಯಕ್ಷ ಅಮಿತ್‌ ಷಾ  ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಭೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

ಕಾಂಗ್ರೆಸ್‌ ಟೀಕೆ: ಕೇಂದ್ರ ಸಚಿವರು ಆರ್‌ಎಸ್‌ಎಸ್‌ ಮುಂದೆ ವರದಿ ಒಪ್ಪಿಸಿದ್ದಕ್ಕಾಗಿ ಕಾಂಗ್ರೆಸ್ ಟೀಕಿಸಿದೆ.

*
ಸ್ಥಳೀಯ ಭಾಷೆಯಲ್ಲಿ  ಶಿಕ್ಷಣ
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವಂತೆ ಬಿಜೆಪಿಗೆ ಸಲಹೆ ನೀಡಿದ್ದು, ಸ್ಥಳೀಯ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡುವುದು ಸೇರಿದಂತೆ ಹಲವು ಸುಧಾರಣೆಗಳನ್ನು ಅಳವಡಿಸಿಕೊಳ್ಳುವಂತೆ ಹೇಳಿದೆ.

ಪ್ರಾಚೀನ ಭಾರತೀಯ ವಿಜ್ಞಾನ, ವೇದ ಗಣಿತಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕು. ಸಂಸ್ಕೃತ ಹಾಗೂ ಇತರ ಭಾರತೀಯ ಭಾಷೆಗಳನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು. ಜಿಡಿಪಿಯ (ನಿವ್ವಳ ಆಂತರಿಕ ಉತ್ಪನ್ನ) ಶೇ 6ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು ಹಾಗೂ ಚುನಾವಣಾ ಆಯೋಗದ ಮಾದರಿಯಲ್ಲಿ ಶಿಕ್ಷಣ ಆಯೋಗ ರಚಿಸಬೇಕು ಎಂದು ಆರ್‌ಎಸ್‌ಎಸ್‌ ಸಲಹೆ ನೀಡಿದೆ ಎನ್ನಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT