ADVERTISEMENT

ಪ್ರಮಾಣಕ್ಕೆ ಸೇನಾ ಬಹಿಷ್ಕಾರ

ದೇವೇಂದ್ರ ಫಡ್ನವೀಸ್ ಸರ್ಕಾರ ಇಂದು ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ಮುಂಬೈ (ಪಿಟಿಐ): ದೇವೇಂದ್ರ ಫಡ್ನ­ವೀಸ್‌ ನೇತೃತ್ವದ ಮೊದಲ ಬಿಜೆಪಿ ಸರ್ಕಾರ ಮಹಾ­ರಾಷ್ಟ್ರದಲ್ಲಿ ಶುಕ್ರ­ವಾರ ಅಧಿಕಾರ ಸ್ವೀಕರಿಸಲಿದ್ದು,  ಶಿವಸೇನಾ ಈ ಸಮಾರಂಭವನ್ನು ಬಹಿಷ್ಕರಿಸಿದೆ.

‘ಸಂಭವನೀಯ ಮರು ಮೈತ್ರಿ ಬಗ್ಗೆ ಬಿಜೆಪಿ ಜತೆ ಚರ್ಚೆ ನಡೆಯುತ್ತಿದ್ದರೂ  ನಮಗೆ  ಪದೇ ಪದೇ ಅವಮಾನ­ವಾಗು­ತ್ತಿದೆ. ಹೀಗಿರುವಾಗ ನಾವು ಪ್ರಮಾಣ­ವಚನ ಸ್ವೀಕಾರ ಸಮಾರಂಭಕ್ಕೆ ಯಾವ ಮುಖ ಇಟ್ಟುಕೊಂಡು ಹೋಗ­ಬೇಕು’ ಎಂದು ಸೇನಾ ಸಂಸದ ವಿನಾಯಕ್‌್ ರಾವುತ್‌ ಪ್ರಶ್ನಿಸಿದ್ದಾರೆ.

ಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರೊಂದಿಗಿನ ಸಭೆ ಬಳಿಕ ಸುದ್ದಿ­ಗಾರರ ಜತೆ ಮಾತನಾಡಿದ ರಾವುತ್‌, ‘ಬಿಜೆಪಿ ನಮ್ಮನ್ನು ಗೌರವದಿಂದ ಕಾಣು­ತ್ತಿಲ್ಲ ಎನ್ನುವುದು ಸೇನಾ ಶಾಸಕರ ಆಕ್ಷೇಪ.  ನಾವು ಕಾರ್ಯಕ್ರಮಕ್ಕೆ ಹೋಗು­ವು­ದರಲ್ಲಿ ಯಾವ ಅರ್ಥವೂ ಇಲ್ಲ’ ಎಂದರು.

‘ಈ ಕಾರ್ಯಕ್ರಮದಲ್ಲಿ ಶಿವಸೇನಾದ ಯಾರೂ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇಲ್ಲ.   ಮೈತ್ರಿಗಾಗಿ ಮಾತುಕತೆ ನಡೆಯು­ತ್ತಿದೆ. ಈವರೆಗೆ ಯಾವುದೇ ಫಲಿತಾಂಶ ಹೊರಬಿದ್ದಿಲ್ಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್‌್ ಪ್ರತಾಪ್‌್ ರೂಡಿ ಹೇಳಿಕೆ ನೀಡಿದ ಬೆನ್ನಲ್ಲಿಯೇ ಶಿವಸೇನಾ ತಾನು ಪ್ರಮಾಣವಚನ ಸಮಾರಂಭ ಬಹಿಷ್ಕರಿ­ಸುವುದಾಗಿ ಘೋಷಿಸಿದೆ.

ಅದ್ದೂರಿ ಕಾರ್ಯಕ್ರಮ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆ­ಯುವ ಸಮಾರಂಭದಲ್ಲಿ ರಾಜ್ಯಪಾಲ ಸಿ.ವಿದ್ಯಾ­ಸಾಗರ ರಾವ್‌್ ಅವರು ಫಡ್ನವೀಸ್‌ ಅವರಿಗೆ ಪ್ರಮಾಣವಚನ ಬೋಧಿಸು­ವರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ  ಆಡಳಿತದ ರಾಜ್ಯಗಳ ಮುಖ್ಯ­ಮಂತ್ರಿಗಳು, ಮೋದಿ ಸಂಪುಟ ಸಹೋದ್ಯೋಗಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗುವರು.

ಮೋದಿ, ಅಮಿತ್‌ ಷಾ, ನಿತಿನ್‌್ ಗಡ್ಕರಿ ಮತ್ತಿತರರನ್ನು ಖುದ್ದಾಗಿ ಭೇಟಿ­ಯಾಗಿ ಫಡ್ನವೀಸ್‌ ಆಮಂತ್ರಣ ನೀಡಿದ್ದಾರೆ.
ಕಾರ್ಪೊರೇಟ್‌್ ದಿಗ್ಗಜರಾದ ರತನ್‌ ಟಾಟಾ, ಮುಕೇಶ್‌ ಹಾಗೂ ಅನಿಲ್‌್ ಅಂಬಾನಿ, ಆನಂದ್‌ ಮಹಿಂದ್ರಾ, ಆದಿ ಗೋದ್ರೇಜ್‌, ಬಾಲಿವುಡ್‌್ ಗಾಯಕಿ­ಯರಾದ ಲತಾ ಮಂಗೇಶ್ಕರ್‌, ಆಶಾ ಭೋಸ್ಲೆ, ನಟರಾದ ಅಮಿತಾಭ್‌್ ಬಚ್ಚನ್‌್, ಸಲ್ಮಾನ್‌್ ಖಾನ್‌್, ಅಮೀರ್ ಖಾನ್‌, ಶಾರುಖ್‌ ಖಾನ್‌, ಹೃತಿಕ್‌ ರೋಶನ್‌್, ಕ್ರಿಕೆಟ್‌ ತಾರೆ ಸಚಿನ್‌ ತೆಂಡೂಲ್ಕರ್‌, ಸುನೀಲ್‌್ ಗಾವಸ್ಕರ್‌ ಮತ್ತಿತರರು ಭಾಗವಹಿಸುವರು.

ರಾಜ್ಯ ಬಿಜೆಪಿ ಪ್ರಮುಖರ ಸಮಿತಿ ಸದಸ್ಯರಾದ ಏಕನಾಥ್‌ ಖಾಡ್ಸೆ, ಸುಧೀರ್‌್ ಮುಂಗಂಟಿವಾರ್‌, ವಿನೋದ್‌ ತಾವ್ಡೆ ಹಾಗೂ ಪಂಕಜಾ ಮುಂಡೆ, ಪರಿಶಿಷ್ಟ ಜಾತಿ/ಪಂಗಡದ ಶಾಸಕರು ಸೇರಿ ಸುಮಾರು 8 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಸಕಾರಾತ್ಮಕ ಮಾತುಕತೆ: ಎರಡೂ ಪಕ್ಷಗಳ ಮಧ್ಯೆ ಸಕಾರಾತ್ಮಕ ಮಾತುಕತೆ ನಡೆಯುತ್ತಿದೆ ಎಂದು ಸೇನಾ ಸಂಸದ ಹಾಗೂ ವಕ್ತಾರ ಸಂಜಯ್‌್ ರಾವುತ್‌ ಈ ಮೊದಲು ಹೇಳಿದ್ದರು. ಅಲ್ಲದೇ   ಫಡ್ನವೀಸ್‌್ ಹಾಗೂ ಅವರ ತಂಡಕ್ಕೆ ಶುಭ ಹಾರೈಸಿದ್ದರು.  ‘ಫಡ್ನವೀಸ್‌್ ಸಮರ್ಥರು. ಮೇಲಾಗಿ ಯುವ ನಾಯಕರು.  ಎರಡೂ ಪಕ್ಷಗಳು ಸೇರಿ ಸರ್ಕಾರ ರಚಿಸಿದರೆ ಅದು ಸ್ಥಿರವಾಗಿರುತ್ತದೆ’ ಎಂದಿದ್ದರು.

ಮೋದಿ, ಫಡ್ನವೀಸ್‌ ಮುಖಸ್ತುತಿ...
ಶಿವಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ನರೇಂದ್ರ ಮೋದಿ ಹಾಗೂ ಫಡ್ನವೀಸ್‌್ ಅವರನ್ನು ಹಾಡಿಹೊಗಳ­ಲಾಗಿದೆ. ‘ರಾಜ್ಯವು ಇನ್ನು ಮುಂದೆ ಒಳ್ಳೆಯ ದಿನಗಳನ್ನು ಎದುರು ನೋಡಬಹುದು. ಆದರೆ ಎನ್‌ಸಿಪಿ ಬೆಂಬಲದ ಬಗ್ಗೆ ಬಿಜೆಪಿ ಹುಷಾರಾಗಿರಬೇಕು. ಮಹಾರಾಷ್ಟ್ರ­ವನ್ನು ಭ್ರಷ್ಟಾ­ಚಾರ ಮುಕ್ತ ರಾಜ್ಯವನ್ನಾಗಿ ಪರಿವರ್ತಿಸುವ ಆಶ್ವಾಸನೆಯ ಮೇಲೆ ನೀವು ಅಧಿಕಾರಕ್ಕೆ ಬಂದಿದ್ದೀರಿ ಎನ್ನುವುದು ನೆನಪಿ­ರಲಿ’ ಎಂದು ಸೇನಾ ಹೇಳಿದೆ.

‘ವಿದರ್ಭದಲ್ಲಿ ಎನ್‌ಸಿಪಿ ಭಾರಿ ಪ್ರಮಾಣದಲ್ಲಿ ನೀರಾ­ವರಿ ಹಗರಣ ಮಾಡಿದೆ. ಫಡ್ನವೀಸ್‌್ ಅವರೇ  ನೀವು ಈ ಪ್ರಾಂತ್ಯ­ದವರೇ ಆಗಿದ್ದೀರಿ. ಶುರುವಿನ­ಲ್ಲಿಯೇ ನೀವು ಎನ್‌ಸಿಪಿ ಬೆಂಬಲ ತೆಗೆದುಕೊಂಡರೆ ನಿಮ್ಮ ಸರ್ಕಾರದ ಸಾಚಾ­ತನದ ಬಗ್ಗೆ ಪ್ರಶ್ನೆಗಳು ಏಳುತ್ತವೆ’ ಎಂದು ‘‘ಸಾಮ್ನಾ’’ ಸಂಪಾದಕೀಯ­ದಲ್ಲಿ ಎಚ್ಚರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT