ADVERTISEMENT

ಬಂಧಿತ ಉಗ್ರನ ಹಸ್ತಾಂತರಕ್ಕೆ ಭಾರತ ಕೋರಿಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2014, 19:30 IST
Last Updated 1 ಜೂನ್ 2014, 19:30 IST

ನವದೆಹಲಿ (ಪಿಟಿಐ): ಬೆಂಗಳೂರು ಮತ್ತು ಚೆನ್ನೈ­ನಲ್ಲಿರುವ ಇಸ್ರೇಲ್‌ ಮತ್ತು ಅಮೆರಿಕ ಕಾನ್ಸಲೇಟ್‌ ಕಚೇರಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆಪಾದನೆ ಮೇಲೆ ಮಲೇಷ್ಯಾ ಪೊಲೀಸರು ಬಂಧಿಸಿ­ರುವ ಶ್ರೀಲಂಕಾ ಮೂಲದ ಮೊಹಮ್ಮದ್‌ ಹುಸೈನಿ­ಯನ್ನು ಹಸ್ತಾಂತರಿಸುವಂತೆ ಭಾರತ ಕೋರಿದೆ.

ಈ ಸಂಬಂಧ ಆರೋಪಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡುವಂತೆ ಇಂಟರ್‌ಪೋಲ್‌ಗೆ (ಅಂತರರಾಷ್ಟ್ರೀಯ ಪೊಲೀಸ್‌ ಸಂಘಟನೆ) ಮನವಿ ಮಾಡಿಕೊಂಡಿದೆ.

ಹುಸೈನಿ ಬಂಧನಕ್ಕೆ ತಮಿಳುನಾಡು ಪೊಲೀಸರು ಪಡೆದುಕೊಂಡಿರುವ ಜಾಮೀನು ರಹಿತ ವಾರಂಟ್‌ನ ಪ್ರತಿಯನ್ನು ರಾಜತಾಂತ್ರಿಕ ಕಚೇರಿ ಮೂಲಕ ಫ್ರಾನ್ಸ್‌­ನ­ಲ್ಲಿರುವ ಇಂಟರ್‌ಪೋಲ್‌ ಮುಖ್ಯ ಕಚೇರಿಗೆ ಕಳು­ಹಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಮಧ್ಯೆ, ಹುಸೈನಿ ವಿಚಾರಣಾ ವರದಿಯನ್ನು ಹಂಚಿಕೊಳ್ಳುವಂತೆ ಮಲೇಷ್ಯಾಕ್ಕೆ ಭಾರತ ಅಧಿಕೃತ­ವಾಗಿ ಮನವಿ ಪತ್ರ ಕಳುಹಿಸಿದೆ.
ಕಾನ್ಸಲೇಟ್‌ ಕಚೇರಿಗಳ ಮೇಲಿನ ಉದ್ದೇಶಿತ ದಾಳಿಗೆ  ಇಬ್ಬರು ವ್ಯಕ್ತಿಗಳಿಗೆ ಸಹಕರಿಸುವಂತೆ ತನಗೆ ಸೂಚನೆ ಬಂದಿತ್ತು ಎಂಬ ಮಾಹಿತಿಯನ್ನು ಹುಸೈನಿ ಮಲೇಷ್ಯಾ ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಮೂಲಗಳು ಹೇಳಿವೆ.

ಮಲೇಷ್ಯಾ ಪೊಲೀಸರು ಎರಡು ವಾರಗಳ ಹಿಂದೆ ಕ್ವಾಲಾಲಂಪುರ ಬಳಿಯ ಕೆಪಾಂಗ್‌ನಲ್ಲಿ ಮೊಹ­ಮ್ಮದ್‌ ಹುಸೈನಿಯನ್ನು ಬಂಧಿಸಿದ್ದರು. ಈತ ಬೆಂಗಳೂ­ರಿನಲ್ಲಿರುವ ಇಸ್ರೇಲ್‌, ಚೆನ್ನೈ­ನಲ್ಲಿರುವ ಅಮೆರಿಕ ಕಾನ್ಸಲೇಟ್‌ ಕಚೇರಿಗಳ ಮೇಲೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಈತ­ನನ್ನು ಭಾರತದ ಪೋಲಿಸರು ಕೂಡ ಹುಡುಕುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.