ADVERTISEMENT

ಬಹುಮತಕ್ಕೆ ‘ಬರ’ವಿಲ್ಲ, ಬಯಸಿದಷ್ಟು ಬರಲ್ಲ!

ರವೀಂದ್ರ ಭಟ್ಟ
Published 8 ಡಿಸೆಂಬರ್ 2017, 19:30 IST
Last Updated 8 ಡಿಸೆಂಬರ್ 2017, 19:30 IST
ಬಹುಮತಕ್ಕೆ ‘ಬರ’ವಿಲ್ಲ, ಬಯಸಿದಷ್ಟು ಬರಲ್ಲ!
ಬಹುಮತಕ್ಕೆ ‘ಬರ’ವಿಲ್ಲ, ಬಯಸಿದಷ್ಟು ಬರಲ್ಲ!   

ಭರೂಚ್: ದೇಶದ ಅತ್ಯಂತ ‘ಹೈ ವೊಲ್ಟೇಜ್’ ಚುನಾವಣೆ ಎಂದೇ ಪರಿಗಣಿಸಲಾಗಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಹಂತದಲ್ಲಿ ಶನಿವಾರ 89 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 22 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ‘ಗುಜರಾತ್ ಅಸ್ಮಿತೆ’ಯನ್ನು ಪಣಕ್ಕಿಟ್ಟರೆ ಸೋಲುವುದೇ ಅಭ್ಯಾಸವಾಗಿರುವ ಕಾಂಗ್ರೆಸ್ ಪಕ್ಷ ಆಡಳಿತ ವಿರೋಧಿ ಅಲೆಯನ್ನೇ ನಂಬಿಕೊಂಡಿದೆ.

1970ರ ದಶಕದಲ್ಲಿ ಗುಜರಾತಿನ ವಿದ್ಯಾರ್ಥಿಗಳು ಆರಂಭಿಸಿದ ನವ ನಿರ್ಮಾಣ ಚಳವಳಿ ನಂತರ ಅದು ಇಡೀ ದೇಶಕ್ಕೇ ಹಬ್ಬಿತು. ದೇಶದಲ್ಲಿ ಹೊಸ ರಾಜಕೀಯ ಮನ್ವಂತರಕ್ಕೂ ಕಾರಣವಾಯಿತು. ಅದರಿಂದ ಜನತಾ ಪಕ್ಷ ಎಂಬ ಹೊಸ ಪಕ್ಷ ಉದಯವಾಯಿತು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಶಕ್ತವಾಯಿತು.

ಈಗಲೂ ಗುಜರಾತಿನಲ್ಲಿ ಮತ್ತೆ ಯುವ ಜನರ ಆಂದೋಲನ ಶುರುವಾಗಿದೆ. ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಿ ಎಂದು ಹಾರ್ದಿಕ್ ಪಟೇಲ್ ಚಳವಳಿ ಆರಂಭಿಸಿದ್ದರೆ ದಲಿತ ಶಕ್ತಿಯನ್ನು ಒಗ್ಗೂಡಿಸಲು ಜಿಗ್ನೇಶ್ ಮೇವಾನಿ ಬೀದಿಗೆ ಇಳಿದಿದ್ದಾರೆ. ಸಂಪೂರ್ಣ ಮದ್ಯ ನಿಷೇಧ ಇರುವ ರಾಜ್ಯದಲ್ಲಿಯೂ ಮದ್ಯಪಾನದ ಹಾವಳಿ ವಿಪರೀತವಾಗಿದ್ದು ಅದನ್ನು ತಡೆಯಬೇಕು ಎಂದು ಅಲ್ಪೆಶ್ ಠಾಕೂರ್ ಆಂದೋಲನ ನಡೆಸುತ್ತಿದ್ದಾರೆ. ಈ ಯುವ ಹೋರಾಟದಿಂದ ಗುಜರಾತಿನಲ್ಲಿ ಇತಿಹಾಸ ಮರುಕಳಿಸುತ್ತದೆಯೇ?

ADVERTISEMENT

ಈ ಪ್ರಶ್ನೆಗೆ ಹೌದು ಎಂದು ಉತ್ತರಿಸುತ್ತಾರೆ ವಡೋದರದ ಹಿರಿಯ ಕಾಂಗ್ರೆಸ್ಸಿಗ ಜಗದೀಶ್ ಪಟೇಲ್. ‘ಈಗ ರಾಜ್ಯದಲ್ಲಿ ಮತ್ತೆ ನವ ನಿರ್ಮಾಣ ಚಳವಳಿ ಆರಂಭವಾಗಿದೆ. ಇದು ರಾಜ್ಯದಲ್ಲಿ ಪರಿವರ್ತನೆಯನ್ನು ತರುವುದರ ಜೊತೆಗೆ ಕೇಂದ್ರದಲ್ಲಿಯೂ ಪರಿವರ್ತನೆ ತರುತ್ತದೆ’ ಎನ್ನುವುದು ಅವರ ನಂಬಿಕೆ.

‘ಗುಜರಾತಿನಲ್ಲಿ ಈ ಬಾರಿ ಅಂಡರ್ ಕರೆಂಟ್ ಜೋರಾಗಿದೆ. ಅದು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲಿದೆ’ ಎಂದು ಅವರು ಭವಿಷ್ಯ ನುಡಿಯುತ್ತಾರೆ. ಇದೇ ಮಾತನ್ನು ರಾಜ್ಯಸಭೆ ಸದಸ್ಯ ಅಹ್ಮದ್ ಪಟೇಲ್ ಅವರೂ ಉಚ್ಚರಿಸುತ್ತಾರೆ. ‘ಆಡಳಿತ ವಿರೋಧಿ ಅಲೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹಜ್ (ಹಾರ್ದಿಕ್, ಅಲ್ಪೆಶ್, ಜಿಗ್ನೇಶ್) ಆರಂಭಿಸಿರುವ ಸಮರ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ತಂದುಕೊಡುತ್ತದೆ’ ಎಂದು ಅವರು ವಿವರಿಸುತ್ತಾರೆ.

‘ನಮಗೆ ಬಹುಮತ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾವು 110ರಿಂದ 120 ಸ್ಥಾನ ಅಂದಾಜಿಸಿದ್ದೇವೆ. ಅಷ್ಟು ಬಾರದಿದ್ದರೂ ಬಹುಮತಕ್ಕೆ ಕೊರತೆಯಾಗದು’ ಎಂದು ಅಹ್ಮದ್ ಪಟೇಲ್ ಹೇಳಿದರು.

ಬಿಜೆಪಿ ಈ ಬಾರಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದೆ. ‘ಕಳೆದ ಬಾರಿ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಈಗ ಅವರು ದೇಶದ ಪ್ರಧಾನಿಯಾಗಿದ್ದಾರೆ. ಮುಖ್ಯಮಂತ್ರಿಯಾದಾಗ ಗುಜರಾತಿನ ಜನ ಬಿಜೆಪಿಗೆ 115 ಸ್ಥಾನ ನೀಡಿದ್ದರು. ಈಗ ಅವರು ಪ್ರಧಾನಿಯಾಗಿದ್ದರಿಂದ 150ಕ್ಕೂ ಹೆಚ್ಚು ಸ್ಥಾನವನ್ನು ಗುಜರಾತ್ ಜನ ನೀಡುತ್ತಾರೆ. ಇದು ಗುಜರಾತಿನ ಜನರ ಸ್ವಾಭಿಮಾನದ ಪ್ರಶ್ನೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಅನಿಲ್ ಜೈನ್ ಹೇಳುತ್ತಾರೆ.

1995ರಿಂದ ಬಿಜೆಪಿ ಅಧಿಕಾರದಲ್ಲಿದೆ. 1995ರಲ್ಲಿ ಆಡಳಿತ ವಿರೋಧಿ ಅಲೆ ಮತ್ತು ಕಾಂಗ್ರೆಸ್ ಪಕ್ಷದ ಒಳಜಗಳ ಬಿಜೆಪಿಗೆ ಅನುಕೂಲ ಮಾಡಿಕೊಟ್ಟರೆ 2002ರಲ್ಲಿ ಹಿಂದೂ ಅಸ್ಮಿತೆ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ಏರಿಸಿತು. 2007ರಲ್ಲಿ ಅಭಿವೃದ್ಧಿಯ ಮಂತ್ರವನ್ನು ಜಪಿಸಿ ಅಧಿಕಾರಕ್ಕೆ ಬಂದ ಬಿಜೆಪಿ 2012ರಲ್ಲಿ ‘ಗೆದ್ದರೆ ದಿಲ್ಲಿ ಗದ್ದುಗೆ’ ಎಂದು ಪ್ರಚಾರ ಮಾಡಿ ಗದ್ದುಗೆ ಏರಿತು. 2017ರಲ್ಲಿ ಮತ್ತೆ ಗುಜರಾತ್ ಅಸ್ಮಿತೆಯನ್ನು ಬಿಜೆಪಿ ಪಣಕ್ಕೆ ಇಟ್ಟಿದೆ.

‘2014ರವರೆಗೂ ಕೆಂದ್ರದಲ್ಲಿ ಬೇರೆ ಸರ್ಕಾರ ಇದ್ದಿದ್ದರಿಂದ ಗುಜರಾತ್ ಅಭಿವೃದ್ಧಿಗೆ ಸಾಕಷ್ಟು ನೆರವು ಸಿಗುತ್ತಿರಲಿಲ್ಲ. ಈಗ ನಮ್ಮವರೇ ಪ್ರಧಾನಿಯಾಗಿದ್ದರಿಂದ ಗುಜರಾತ್ ಅಭಿವೃದ್ಧಿ ಸುಲಭವಾಗಿದೆ. ಇದು ಮುಂದುವರಿಯಬೇಕು ಎಂದರೆ ಬಿಜೆಪಿಯನ್ನು ಗೆಲ್ಲಿಸಿ’ ಎಂದು ರಾಜ್ಯ ಬಿಜೆಪಿ ಮುಖಂಡರು ಪ್ರಚಾರ ಕೈಗೊಂಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎನ್ನುವುದನ್ನು ನೋಡಲು ಡಿ.18ರವರೆಗೆ ಕಾಯಬೇಕು.

ಸೌರಾಷ್ಟ್ರ, ಉತ್ತರ ಮತ್ತು ದಕ್ಷಿಣ ಗುಜರಾತ್ ಪ್ರದೇಶಗಳಲ್ಲಿ ಓಡಾಡಿದಾಗ ಗಮನಕ್ಕೆ ಬಂದ ಮುಖ್ಯ ವಿಷಯ ಎಂದರೆ ಗುಜರಾತ್ ನಲ್ಲಿ ಈಗ ನಾಲ್ಕು ರೀತಿಯ ಗುಂಪುಗಳಿವೆ. ನರೇಂದ್ರ ಮೋದಿ ಮತ್ತು ಬಿಜೆಪಿ ಬೆಂಬಲಿಗರು, ಮೋದಿ ಬೆಂಬಲಿಗರು ಆದರೆ ಬಿಜೆಪಿ ವಿರೋಧಿಗಳು, ಮೋದಿ ವಿರೋಧಿಗಳು ಆದರೆ ಕಾಂಗ್ರೆಸ್ ವಿರೋಧಿಗಳೂ ಹೌದು, ಮೋದಿ ವಿರೋಧಿಗಳು ಮತ್ತು ಕಾಂಗ್ರೆಸ್ ಬೆಂಬಲಿಗರು. ಈ ನಾಲ್ಕು ಗುಂಪುಗಳಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಈಗಿನ ಕುತೂಹಲ.

‘ನಾನು ಗುಜರಾತಿ. ಗುಜರಾತಿನ ಸ್ವಾಭಿಮಾನವನ್ನು ಕಾಪಾಡಲು ಬಿಜೆಪಿಯನ್ನು ಗೆಲ್ಲಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ‍್ಯಾಲಿಯಲ್ಲಿ ಕರೆ ನೀಡಿದ್ದರು. ಅದಕ್ಕೆ ಪಾಟಿದಾರ್ ಆಂದೋಲನದ ಸಕ್ರಿಯ ಸದಸ್ಯ ಮನೀಶ್ ಪಟೇಲ್ ನೀಡುವ ಉತ್ತರ ಕುತೂಹಲಕಾರಿಯಾಗಿದೆ. ‘ನೀವು ಗುಜರಾತಿನವರಾದರೆ ನಾವೇನು ಜಪಾನ್ ನಿಂದ ಬಂದವರಾ. ನಾವೂ ಗುಜರಾತಿನವರೆ. ನಿಮ್ಮನ್ನು ಗುಜರಾತಿನ ‘ಹೆಮ್ಮೆ’ಯನ್ನಾಗಿ ಮಾಡಿದ್ದು ಕೂಡ ನಾವೆ. ನಿಮಗೆ ಎಷ್ಟು ಸ್ವಾಭಿಮಾನ ಇದೆಯೋ, ಕೆಚ್ಚು ಇದೆಯೋ ಅಷ್ಟೇ ಕೆಚ್ಚು, ಸ್ವಾಭಿಮಾನ ನಮಗೂ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ‘ಈ ಬಾರಿ ನಾವು ಬಿಜೆಪಿ ವಿರುದ್ಧ ಮತ ಚಲಾಯಿಸುತ್ತೇವೆ. 2019ರಲ್ಲಿ ಮತ್ತೆ ಮೋದಿಯನ್ನು ಬೆಂಬಲಿಸುತ್ತೇವೆ. 22 ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿಗೆ ಭಾರೀ ಅಹಂಕಾರ ಬಂದಿದೆ. ಅದು ಇಳಿಯಬೇಕು’ ಎಂದು ಹಿತೇನ್ ಪಟೇಲ್ ಹೇಳಿದರು. ಗುಜರಾತಿನಲ್ಲಿ ಈಗ ಇರುವ ಅಂಡರ್ ಕರೆಂಟ್ ಇದೇ ಎಂದು ಜಗದೀಶ್ ಪಟೇಲ್ ಅವರ ವಾದ. ಈ ಕರೆಂಟ್ ಬಿಜೆಪಿಗೆ ಶಾಕ್ ನೀಡುತ್ತದೆ ಎನ್ನುವುದು ಅವರ ವಿಶ್ವಾಸ.

ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಶದಿಂದ ಬಿಜೆಪಿ ಗರಿಗೆದರಬೇಕಾದ ಅಗತ್ಯವಿಲ್ಲ. ಯಾಕೆಂದರೆ 2015ರಲ್ಲಿ ಇಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿತ್ತು. ಸೌರಾಷ್ಟ್ರ ಮತ್ತು ಉತ್ತರ ಗುಜರಾತಿನಲ್ಲಿ ಪಟೇಲ್ ಸಮುದಾಯ ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದರು. ಅದೇ ವಿದ್ಯಮಾನ ಈಗಿನ ವಿಧಾನಸಭಾ ಚುನಾವಣೆಯಲ್ಲಿಯೂ ಆಗುತ್ತದೆ. ಯಾಕೆಂದರೆ ಬಿಜೆಪಿಯನ್ನು ರಾಜ್ಯದಲ್ಲಿ ಬೆಳೆಸಿದ ಮತ್ತು ಬಿಜೆಪಿಯ ಬೆನ್ನೆಲುಬಾಗಿರುವ ಪಟೇಲ್ ಸಮುದಾಯ ಈಗ ಇನ್ನೂ ಹಚ್ಚಿನ ಸಿಟ್ಟು ಬೆಳೆಸಿಕೊಂಡಿದೆ. ಗುಜರಾತ್ ಜನಸಂಖ್ಯೆಯಲ್ಲಿ ಶೇ 14ರಷ್ಟಿರುವ ಪಟೇಲರು, ಶೇ 40ರಷ್ಟಿರುವ ಹಿಂದುಳಿದ ವರ್ಗದವರು, ಶೇ 10ರಷ್ಟಿರುವ ಮುಸ್ಲಿಂ ಸಮುದಾಯ ಬಿಜೆಪಿ ವಿರುದ್ಧ ಇರುವಾಗ ಬಿಜೆಪಿ ಬಹುಮತ ಪಡೆಯುತ್ತದೆ. 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ನಿರೀಕ್ಷಿಸುವುದು ಹಗಲುಗನಸು ಎಂದು ಕಾಂಗ್ರೆಸ್ ವಕ್ತಾರ ಮನೀಶ್ ಧೋಶಿ ಅಭಿಪ್ರಾಯಪಡುತ್ತಾರೆ.

ಬಹುಮತಕ್ಕೆ ಬರವಿಲ್ಲ ಎಂದು ಎರಡೂ ಪಕ್ಷದ ಮುಖಂಡರೂ ಹೇಳುತ್ತಾರೆ. ಬಯಸಿದಷ್ಟು ಬರಲಿಕ್ಕಿಲ್ಲ ಎಂಬ ಅನುಮಾನವೂ ಅವರಿಗೆ ಇದೆ. ‘ನಾವು ಮೊದಲ ರ‍್ಯಾಂಕ್ ಪಡೆಯಲು ಓದಿದ್ದೇವೆ. ಮೊದಲ ರ‍್ಯಾಂಕ್ ಅಲ್ಲವಾದರೆ 2 ಅಥವಾ 3ನೇ ರ‍್ಯಾಂಕ್ ಆದರೂ ಬರಲಿ ಬಿಡಿ’ ಎಂದು ಬಿಜೆಪಿ ಪ್ರಮುಖ್ ಪ್ರಕಾಶ ನೀಡಿದ ಹೇಳಿಕೆ ಬಿಜೆಪಿ ಮನಸ್ಥಿತಿಯನ್ನು ಬಿಂಬಿಸುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.