ADVERTISEMENT

ಭಾರತೀಯ ರೈಲ್ವೆ ಪೂರೈಸುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಲ್ಲ: ಸಿಎಜಿ ವರದಿ

ಏಜೆನ್ಸೀಸ್
Published 21 ಜುಲೈ 2017, 13:59 IST
Last Updated 21 ಜುಲೈ 2017, 13:59 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ನವದೆಹಲಿ: ‘ಭಾರತೀಯ ರೈಲ್ವೆ ಇಲಾಖೆ ಪೂರೈಸುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಲ್ಲ’ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

ಸಂಸತ್ತಿನಲ್ಲಿ ಶುಕ್ರವಾರ ಸಲ್ಲಿಕೆಯಾದ ಸಿಎಜಿ ವರದಿಯಿಂದ ಈ ಅಂಶ ಬಯಲಾಗಿದೆ.

‘ರೈಲು ನಿಲ್ದಾಣಗಳು ಹಾಗೂ ರೈಲುಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ಪೂರೈಕೆ ಮಾಡುವ ಆಹಾರದ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ದೇಶದ ಆಯ್ದ 74 ನಿಲ್ದಾಣಗಳು ಮತ್ತು 80 ರೈಲುಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಭಾರತೀಯ ರೈಲ್ವೆ ಇಲಾಖೆಯ ಆಹಾರ ಘಟಕಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲಾಗಿಲ್ಲ’ ಎಂದು ಸಿಎಜಿ ವರದಿ ವಿವರಿಸಿದೆ.

ADVERTISEMENT

‘ಪರಿಶೀಲನೆ ವೇಳೆ ರೈಲು ಮತ್ತು ನಿಲ್ದಾಣಗಳಲ್ಲಿ ಆಹಾರ, ತಂಪು ಪಾನೀಯ ಮತ್ತು ನೀರು ಪೂರೈಕೆಯಲ್ಲಿ ಸ್ವಚ್ಛತೆ ಇಲ್ಲದಿರುವುದು ಕಂಡುಬಂದಿದೆ. ಅಲ್ಲದೆ ಬ್ರಾಂಡೆಡ್‌ ಅಲ್ಲದ ನೀರಿನ ಬಾಟಲಿಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ’ ಎಂದು ವರದಿ ಹೇಳಿದೆ.

‘ನೊಣ, ದೂಳು, ಇರುವೆ, ಇಲಿ, ಜಿರಲೆಗಳಿಂದ ಆಹಾರವನ್ನು ಸಂರಕ್ಷಿಸುವಂತಹ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಆಹಾರದ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದಿರುವುದು ಸಹ ಇದೇ ವೇಳೆ ಬೆಳಕಿಗೆ ಬಂದಿದೆ’ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.