ADVERTISEMENT

ಭೂಸ್ವಾಧೀನ ಸುಗ್ರೀವಾಜ್ಞೆ: ಮೋದಿ ವಿರುದ್ಧ ಹಜಾರೆ ಕಿಡಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2015, 9:04 IST
Last Updated 23 ಫೆಬ್ರುವರಿ 2015, 9:04 IST

ನವದೆಹಲಿ (ಪಿಟಿಐ): ಭೂ ಸ್ವಾಧೀನ ಸುಗ್ರೀವಾಜ್ಞೆ ವಿರೋಧಿಸಿ ಸೋಮವಾರ ಎರಡು ದಿನಗಳ ಸತ್ಯಾಗ್ರಹ ಆರಂಭಿಸಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಮೋದಿ ಸರ್ಕಾರವು ರೈತ ವಿರೋಧಿ ಧೋರಣೆ ಹೊಂದಿದೆ ಎಂದು ಆರೋಪಿಸಿದ್ದಾರೆ.

ಕಾಕತಾಳೀಯ ಎಂಬಂತೆ ಸಂಸತ್ತಿನ ಬಜೆಟ್ ಅಧಿವೇಶನದ ಆರಂಭದ ದಿನವೇ ಹಜಾರೆ ಅವರ ಹೋರಾಟವೂ ಶುರುವಾಗಿದೆ.

ಇಲ್ಲಿನ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಸತ್ಯಾಗ್ರಹದಲ್ಲಿ 77 ವರ್ಷದ ಹಜಾರೆ ಅವರಿಗೆ ನರ್ಮದಾ ಬಚಾವೋ ಆಂದೋಲನ ಹೋರಾಟಗಾರ್ತಿ ಮೇಧಾ ಪಾಟ್ಕರ್ ಹಾಗೂ ನೂರಾರು ಬೆಂಬಲಿಗರು ಸಾಥ್‌ ನೀಡಿದ್ದಾರೆ.

ADVERTISEMENT

‘ರೈತರ ಒಪ್ಪಿಗೆ ಇಲ್ಲದೇ ನೀವು ಅದ್ಹೇಗೆ ಭೂಮಿಯನ್ನು ಪಡೆಯುತ್ತೀರಿ? ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಸರ್ಕಾರವು ರೈತರ ಬಗ್ಗೆ ಕಾಳಜಿ ವಹಿಸಬೇಕು. ಭೂಸ್ವಾಧೀನ ಸುಗ್ರೀವಾಜ್ಞೆಯು ಪ್ರಜಾಪ್ರಭುತ್ವ ವಿರೋಧಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ, ‘ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಸರ್ಕಾರ ನಡೆಯಲು ಸಾಧ್ಯವಿಲ್ಲ. ಇದು ಭಾರತೀಯ ಜನರ ಸರ್ಕಾರ. ಇಂಗ್ಲೆಂಡ್‌ ಅಥವಾ ಅಮೆರಿಕದ ಸರ್ಕಾರವಲ್ಲ. ಜನರು ಮಾಡಿರುವ ಸರ್ಕಾರ’ ಎಂದರು.

ಎಎಪಿ ಅಥವಾ ಕಾಂಗ್ರೆಸ್‌ಗೆ ಈ ಹೋರಾಟದ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದಿರುವ ಹಜಾರೆ, ಉಭಯ ಪಕ್ಷಗಳು ಶ್ರೀಸಾಮಾನ್ಯರಾಗಿ ಹೋರಾಟದಲ್ಲಿ ಪಾಲ್ಗೊಳ್ಳಬಹುದು ಎಂದಿದ್ದಾರೆ.

ಸರ್ಕಾರವು ರೈತರ ಬೇಡಿಕೆಗಳಿಗೆ ಶೀಘ್ರವೇ ಗಮನ ನೀಡದ ಪಕ್ಷದಲ್ಲಿ ಈ ಹೋರಾಟವನ್ನು ದೇಶದ ಪ್ರತಿ ಜಿಲ್ಲೆಗೂ ಕೊಂಡೊಯ್ದು ಮತ್ತೆ ರಾಮಲೀಲಾ ಮೈದಾನಕ್ಕೆ ಮರಳಿ ಬರುವುದಾಗಿ ಹಜಾರೆ ಎಚ್ಚರಿಸಿದ್ದಾರೆ.

‘ಈ ಬಗ್ಗೆ ಹಳ್ಳಿಗಳಲ್ಲಿರುವ ಜನರಿಗೆ ಈಗಲೂ ಮಾಹಿತಿಯಿಲ್ಲ. ಇದೀಗ ನಾವು ಎಲ್ಲಾ ರಾಜ್ಯಗಳು ಹಾಗೂ ಜಿಲ್ಲೆಗಳ ಜನತೆಗೆ ಈ ಸುಗ್ರೀವಾಜ್ಞೆಯ ಬಗ್ಗೆ ಅರಿವು ಮೂಡಿಸುತ್ತೇವೆ. ಪ್ರತಿಯೊಂದು ಜಿಲ್ಲೆಗೂ ಭೇಟಿ ನೀಡುವ ಅಗತ್ಯವಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.