ADVERTISEMENT

ಮಕ್ಕಳ ಹೃದಯ ಗೆದ್ದ ‘ಮಿಸೈಲ್ ಮ್ಯಾನ್’

ನಾಗೇಶ ಹೆಗಡೆ
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ಮನೆಮನೆಗೆ ಪೇಪರ್ ಹಾಕುತ್ತಿದ್ದ ಹುಡುಗ ರಾಷ್ಟ್ರಪತಿ ಹುದ್ದೆಗೇರಿ ಮನೆಮನೆಯ ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿ ಕೂತ ಉದಾಹರಣೆ ಬೇರೆ ಯಾವ ದೇಶದಲ್ಲೂ ಸಿಗಲಿಕ್ಕಿಲ್ಲ. ಭಾರತದ ’ಮಿಸೈಲ್ ಮ್ಯಾನ್’ ಎಂದೇ ಖ್ಯಾತಿ ಪಡೆದ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ವಿಜ್ಞಾನವನ್ನು ಮುನ್ನೆಲೆಗೆ ತಂದು ನಿಲ್ಲಿಸಿದ ಅಪರೂಪದ ರಾಷ್ಟ್ರಪತಿ ಎನ್ನಿಸಿಕೊಂಡವರು.  

ವಿಜ್ಞಾನದ ಬಗ್ಗೆ ಮಾತನಾಡುವವರು ನಿನ್ನೆಗಿಂತ ನಾಳೆಗಳ ಬಗೆಗೇ ಹೆಚ್ಚು ಚಿಂತನೆ ನಡೆಸುತ್ತಾರೆ. ಕಲಾಂ ಕನಸಿನ ತುಂಬ ಸುಂದರ, ಸುಭದ್ರ ನಾಳೆಗಳೇ ತುಂಬಿಕೊಂಡಿದ್ದವು. ತಮ್ಮ ಕನಸುಗಳನ್ನು ಹಿರಿಯರ ಜೊತೆ ಹಂಚಿಕೊಳ್ಳುವುದಕ್ಕಿಂತ ಹೆಚ್ಚಾಗಿ ಮಕ್ಕಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಅದಕ್ಕಾಗಿ ಅವರು ಸಣ್ಣಪುಟ್ಟ ಶಾಲೆಗಳಿಗೂ ಹೋಗುತ್ತಿದ್ದರು. ಮಕ್ಕಳೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ಪುಟಾಣಿಗಳಿಗೆ ಪಾಠ ಹೇಳುತ್ತಿದ್ದರು. ‘ನಾನು ಹೇಳಿದಂತೆ ಹೇಳಿ’ ಎಂದು ಥೇಟ್ ಶಾಲೆಯ ಮಾಸ್ತರ್‌ರ ಹಾಗೆ ಮಕ್ಕಳೆದುರು ನಿಂತು, ‘ನಾನು ದೇಶಕ್ಕಾಗಿ ದೇಹವನ್ನು, ಮನಸ್ಸನ್ನು ಮುಡಿಪಾಗಿಡುತ್ತೇನೆ’ ಎಂದು ಅವರ ಬಾಯಿಂದ ಹೇಳಿಸುತ್ತಿದ್ದರು. ಚಪ್ಪಾಳೆ ಗಿಟ್ಟಿಸುತ್ತಿದ್ದರು.

ಅವರ ಕನಸಿಗೆ ಒಂದು ಭವ್ಯ ತಳಹದಿಯೂ ಇತ್ತು. ಮಗುವಾಗಿದ್ದಾಗ ಅವರೇನೂ ಮೊದಲ ರ್‍ಯಾಂಕಿನ ವಿದ್ಯಾರ್ಥಿ ಆಗಿರಲಿಲ್ಲ. ಆದರೆ ಸತತ ಪರಿಶ್ರಮ ಮತ್ತು ಛಲ ಅವರ ಬೆನ್ನಿಗಿತ್ತು. ಪೇಪರ್ ಹಾಕುವ ಹುಡುಗನಾಗಿ ಕ್ರಮೇಣ ಮದ್ರಾಸ್ ತಂತ್ರಜ್ಞಾನ ಸಂಸ್ಥೆಯಲ್ಲಿ ಭೌತವಿಜ್ಞಾನದ ಪದವಿ ಪಡೆದು ಅವರು ಭಾರತ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ (ಡಿಆರ್‌ಡಿಓ) ಸಂಸ್ಥೆಯನ್ನು ಸೇರುತ್ತಾರೆ.
ಹೆಲಿಕಾಪ್ಟರ್‌ಗಳನ್ನು ಹಾಗೂ ರಾಕೆಟ್‌ಗಳನ್ನು ರೂಪಿಸುವಲ್ಲಿ ಅವರು ತೋರಿದ ಉತ್ಸಾಹವನ್ನು ನೋಡಿ ವಿಕ್ರಮ್ ಸಾರಾಭಾಯಿಯವರು ಕಲಾಂ ಅವರನ್ನು ಅದೇತಾನೆ ಆರಂಭವಾದ ‘ಇಸ್ರೊ’ ಸಂಸ್ಥೆಗೆ ಸೇರಿಸಿಕೊಳ್ಳುತ್ತಾರೆ.

ಇಸ್ರೊ ಸಂಸ್ಥೆ ಆರಂಭವಾದ ಹೊಸದರಲ್ಲೇ ಕಲಾಂ ಅಮೆರಿಕದ ನಾಸಾಕ್ಕೆ ಭೇಟಿ ನೀಡಿದ್ದರು. ಅಲ್ಲಿ ಗೊಡ್ಡಾರ್ಡ್ ಸ್ಪೇಸ್ ಸೆಂಟರ್‌ನಲ್ಲಿ ಓಡಾಡುತ್ತಿದ್ದಾಗೆ ಅವರಿಗೆ ನಿಜಕ್ಕೂ ನೂಕುಬಲ ಸಿಕ್ಕಿತು (ರಾಬರ್ಟ್ ಗೊಡ್ಡಾರ್ಡ್ ಎಂಬ ಅಮೆರಿಕನ್ ಎಂಜಿನಿಯರ್‌ಗೆ ‘ಕ್ಷಿಪಣಿಗಳ ಪಿತಾಮಹ’ ಎಂತಲೇ ಅಭಿದಾನವಿದೆ). ‘ಅಲ್ಲೇ ನನಗೆ ನನ್ನ ನಿಜವಾದ ಆಸಕ್ತಿ ರೂಪುಗೊಂಡಿದ್ದು’ ಎಂದು ಒಂದೆಡೆ ಕಲಾಂ ಬರೆದುಕೊಂಡಿದ್ದರು.

ಬಾಹ್ಯಾಕಾಶ ಎಂದರೆ ಕೇವಲ ಉಪಗ್ರಹಗಳನ್ನು ತಯಾರಿಸುವುದಲ್ಲ. ಹಾಗೆ ತಯಾರಾದ ಉಪಗ್ರಹಗಳನ್ನು ಮೇಲಕ್ಕೆತ್ತಿ ಕವಣೆಯಂತೆ ತೂರಿಸಬಲ್ಲ ಕ್ಷಿಪಣಿ (ಮಿಸೈಲ್)ಗಳು ಬೇಕಲ್ಲ? ಉಪಗ್ರಹಗಳಿಗಿಂತ ಹೆಚ್ಚಿನ ಮಹತ್ವ ಅದನ್ನೊಯ್ಯುವ ರಾಕೆಟ್‌ಗಳಿಗೆ ಇರಬೇಕು ಎಂದು ಇವರು ಬಲವಾಗಿ ಪ್ರತಿಪಾದಿಸಿ, ‘ಇಸ್ರೊ’ದಲ್ಲಿ ಇವರು ಸ್ವತಃ ಎತ್ತರಕ್ಕೇರತೊಡಗಿದರು. ಎಸ್‌ಎಲ್‌ವಿ ರಾಕೆಟ್‌ಗಳನ್ನು ರೂಪಿಸುವ ಎಂಜಿನಿಯರ್‌ಗಳಿಗೆಲ್ಲ ಇವರು ಉತ್ಸಾಹ ತುಂಬತೊಡಗಿದರು. ಭಾರತದ ಮೊದಲ ‘ರೋಹಿಣಿ’ ಉಪಗ್ರಹವನ್ನು ಮೇಲಕ್ಕೆತ್ತಿದ ರಾಕೆಟ್ಟನ್ನು ಇವರ ನಿರ್ದೇಶನದಲ್ಲೇ ತಯಾರಿಸಲಾಗಿತ್ತು.

ಕಿರಿಯ ಸಹೋದ್ಯೋಗಿಗಳಲ್ಲಿ ಭರವಸೆ ಮತ್ತು ಉತ್ಸಾಹ ತುಂಬುವ ಕೆಲಸ ಏನಿದೆ ಅದು ನಿಜವಾದ ಎಂಜಿನಿಯರಿಂಗ್ ಸಾಹಸಕ್ಕಿಂತ ಮೇಲ್ದರ್ಜೆಯದು. ಕಲಾಂ ಅವರ ಪರಿಶ್ರಮವನ್ನು ನೋಡಿ, ಡಾ. ರಾಜಾ ರಾಮಣ್ಣ ಇವರಿಗೆ ದೇಶದ ಮೊದಲ ಪರಮಾಣು ಸ್ಫೋಟವನ್ನು ನೋಡಲೆಂದು ಕರೆದೊಯ್ದರು. ಹಾಗೆ ನೋಡಿದರೆ ಅದಕ್ಕೂ ಇವರಿರುವ ‘ಇಸ್ರೊ’ಕ್ಕೂ ಸಂಬಂಧವೇ ಇಲ್ಲ. ಅದರ ಫಲ ಏನೆಂದರೆ ಪೋಖ್ರನ್-೨ರ ಸ್ಫೋಟದಲ್ಲಿ ಅವರೇ ನೇರ ನಿರ್ದೇಶನ ನೀಡುವಂತಾಯಿತು. ಮತ್ತೆ ಇಸ್ರೋದ ಧ್ರುವಗಾಮೀ ಉಪಗ್ರಹಗಳನ್ನು ಹೊತ್ತೊಯ್ಯುವ ಶಕ್ತಿಶಾಲಿ ರಾಕೆಟ್‌ಗಳನ್ನು ರೂಪಿಸಲು ಬಲ ಸಿಕ್ಕಂತಾಯಿತು.

ಕ್ಷಿಪಣಿ ತಜ್ಞರೆನಿಸಿದ ಕಲಾಂ ಅಂಥ ಬಾಹ್ಯಾಕಾಶ ತಂತ್ರಜ್ಞಾನಗಳಿಂದ ನೆಲದ ಮೇಲಿನ ಜನಕ್ಕೂ ಏನೇನು ಪ್ರಯೋಜನ ಆಗಲಿಕ್ಕಿದೆ ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದರು. ಕಾಲಿನಲ್ಲಿ ನಡೆಯುವ ಶಕ್ತಿ ಇಲ್ಲದವರಿಗಾಗಿ   ಕ್ಷಿಪಣಿಗಳಲ್ಲಿ ಬಳಸಲಾಗುವ ಹಗುರ ಲೋಹಗಳನ್ನೇ ಬಳಸಿ ಕ್ಯಾಲಿಪರ್ಸ್‌ಗಳನ್ನು ರೂಪಿಸಲು ಒತ್ತಾಸೆ ನೀಡಿದ್ದರು. ಅಷ್ಟೇ ಅಲ್ಲ, 1998ರಲ್ಲಿ ಸೋಮಾ ರಾಜು ಎಂಬ ಹೃದ್ರೋಗ ತಜ್ಞರ ಜೊತೆ ಸೇರಿ ಅಲ್ಪವೆಚ್ಚದ ಸ್ಟೆಂಟ್‌ಗಳನ್ನೂ ರೂಪಿಸಿದ್ದರು. ಹೃದಯದ ರಕ್ತನಾಳಗಳು ಕುಗ್ಗದಂತೆ ತಡೆಹಿಡಿಯುವ ಈ ಸಾಧನಕ್ಕೂ ‘ಕಲಾಂ ರಾಜು ಸ್ಟೆಂಟ್’ ಎಂದೇ ಹೆಸರು ಬಂದಿದೆ. 

ಹೃದಯ ಇರುವವರಿಗೆ ತಾನೆ ಅಂಥ ತಂತ್ರಜ್ಞಾನವನ್ನು ರೂಪಿಸಬೇಕೆಂಬ ಪ್ರೇರಣೆ ಸಿಗುವುದು? ದೇಶದ ನಾಳಿನ ಭವಿಷ್ಯದ ಬಗ್ಗೆ ಕಳಕಳಿ ಇರುವುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT