ADVERTISEMENT

ಮತ್ತೆ ಮಳೆ ಆರ್ಭಟ: ತಮಿಳುನಾಡು ತತ್ತರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 19:30 IST
Last Updated 1 ಡಿಸೆಂಬರ್ 2015, 19:30 IST

ಚೆನ್ನೈ: ಒಂದು ವಾರದ ಹಿಂದೆ ಭಾರಿ ಮಳೆಯಿಂದ ತತ್ತರಿಸಿದ್ದ ತಮಿಳುನಾಡಿನಲ್ಲಿ ಮತ್ತೆ ವರುಣ ಅಬ್ಬರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ಸಂಜೆಯಿಂದ ಚೆನ್ನೈ  ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ.

ಚಂಡಮಾರುತದ ಪರಿಣಾಮ ಹೋದ ತಿಂಗಳು ತಮಿಳುನಾಡಿನಲ್ಲಿ ದಾಖಲೆಯ ಮಳೆಯಾಗಿತ್ತು. ವರುಣ ಅಲ್ಪ ಬಿಡುವು ನೀಡಿದ್ದರಿಂದ ಜನಜೀವನ ಸಹಜಸ್ಥಿತಿಗೆ ಮರಳುತ್ತಿತ್ತು.  ಆದರೆ ಮಳೆ ಮತ್ತೆ ಅಬ್ಬರಿಸಿದ ಕಾರಣ ಜನರು ಮನೆಯಿಂದ ಹೊರಗಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಮಾನ. ರೈಲು ಸೇವೆ ವ್ಯತ್ಯಯ:  ಭಾರಿ ಮಳೆಯ ಕಾರಣ ವಿಮಾನ ಮತ್ತು ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 40 ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ತರಲಾಗಿದೆ.

‘ಸಿಂಗಪುರಕ್ಕೆ ತೆರಳಬೇಕಿದೆ. ಆದರೆ ನನ್ನ ವಿಮಾನದ ಹಾರಾಟದ ಸಮಯವನ್ನು 10 ಸಲ ಬದಲಾಯಿಸಲಾಗಿದೆ’ ಎಂದು ಮ್ಯಾಥ್ಯೂ ಥಾಮಸ್‌ ಎಂಬ ಪ್ರಯಾಣಿಕ  ಅಸಹಾಯಕತೆಯಿಂದ ಹೇಳಿದ್ದಾರೆ.

ಚೆನ್ನೈನಿಂದ ಹೊರಡಬೇಕಿದ್ದ 12 ರೈಲುಗಳನ್ನು ರದ್ದುಗೊಳಿಸಲಾಗಿದೆ. ನಗರದ ಹಲವು ಕಡೆ ರೈಲ್ವೆ ಹಳಿಗಳು ನೀರಿನಿಂದ ಮುಳುಗಿವೆ. ತಮಿಳುನಾಡಿನ ದಕ್ಷಿಣದ ಜಿಲ್ಲೆಗಳಿಂದ ಚೆನ್ನೈಗೆ ಬರಬೇಕಿದ್ದ ರೈಲುಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ.

ರಸ್ತೆ ಬ್ಯಾರಿಕೇಡ್‌ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ರಸ್ತೆಯಲ್ಲಿ ನೀರಿನ ಪ್ರಮಾಣ ಇದ್ದಕ್ಕಿದ್ದಂತೆ ಹೆಚ್ಚಿದ ಕಾರಣ ಕೆಲವು ಬಸ್ಸುಗಳು ಸಂಚಾರವನ್ನು ಅರ್ಧದಲ್ಲೇ ಮೊಟಕುಗೊಳಿಸಿವೆ. ದೊಡ್ಡ ಟ್ರಕ್‌ಗಳೂ ನೀರಿನಲ್ಲಿ ಸಿಲುಕಿದ ಕಾರಣ ಸಂಚಾರಕ್ಕೆ ತೊಂದರೆ ಉಂಟಾಯಿತು. 

ಚೆನ್ನೈ ಮತ್ತು ಹೊರವಲಯದ ಪ್ರದೇಶಗಳು ಹಾಗೂ ಕೆಲ ಜಿಲ್ಲೆಗಳಲ್ಲಿ ವಿದ್ಯುತ್‌ ಕೈಕೊಟ್ಟಿದೆ.  ಚೆನ್ನೈನ ಎಲ್ಲ ಐಟಿ ಕಂಪೆನಿಗಳು ರಜೆ ಘೋಷಿಸಿವೆ. ಅದೇ ರೀತಿ ಕೆಲವು ಖಾಸಗಿ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಲ್ಲೇ ಕುಳಿತು ಕೆಲಸ ಮಾಡುವಂತೆ ಸೂಚಿಸಿವೆ.

ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಕಚೇರಿಗೆ ತೆರಳಿದ ನೌಕರರು ಸಾಕಷ್ಟು ತೊಂದರೆ ಎದುರಿಸಿದ್ದಾರೆ.

ಆಂಧ್ರದಲ್ಲೂ ನಿಲ್ಲದ ಮಳೆ
ಹೈದರಾಬಾದ್: ಆಂಧ್ರಪ್ರದೇಶದ ದಕ್ಷಿಣ ಕರಾವಳಿಯಲ್ಲಿ ಸತತ ಮೂರನೇ ದಿನವೂ ಮಳೆಯ ಅಬ್ಬರ ಮುಂದುವರಿ ದಿದೆ. ಚಿತ್ತೂರು, ನೆಲ್ಲೂರು ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿತ್ತು. ರಸ್ತೆ ಹಾಗೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ  ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ಕೇವಲ 24 ಗಂಟೆಯಲ್ಲಿ ಚಿತ್ತೂರು ಜಿಲ್ಲೆಯೊಂದರಲ್ಲೇ 10 ಸೆ.ಮೀ. ಮಳೆ ಬಿದ್ದ ವರದಿಯಾ ಗಿದೆ. ಹೀಗಾಗಿ ತಿರುಪತಿ ಹಾಗೂ ತಿರುಮಲದಲ್ಲಿ ಭಕ್ತರು  ಸಂಕಷ್ಟ ಎದುರಿಸಬೇಕಾಯಿತು.

ಮಳೆ ಇದ್ದರೂ  ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆಯೇನೂ ಕಡಿಮೆಯಾಗಿರಲಿಲ್ಲ. ಸರ್ವದರ್ಶನ ಮೂರು ಗಂಟೆಗಳಲ್ಲಿ ಮುಗಿಯಿತು. 300 ರೂಪಾಯಿಯ ವಿಶೇಷ ದರ್ಶನಕ್ಕೆ ಒಂದು ಗಂಟೆ ಹಿಡಿಯಿತು. ಮಳೆಯ ನಡುವೆಯೂ ಒಟ್ಟಾರೆ ಸೋಮವಾರ 54, 410 ಭಕ್ತರು ದರ್ಶನ ಪಡೆದಿದ್ದಾರೆ. ಭಕ್ತರಿಗಾಗಿ ದೇವಸ್ಥಾನ ಆಡಳಿತ ಮಂಡಳಿ ಉಚಿತ ಆಹಾರ,  ಕುಡಿಯುವ ನೀರಿನ ವ್ಯವಸ್ಥೆ ಮಾಡಿತ್ತು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT