ADVERTISEMENT

ಮತ್ತೆ ವಕೀಲರ ಅಟ್ಟಹಾಸ

ಮಾರ್ಚ್‌ 2ರ ವರೆಗೆ ಕನ್ಹಯ್ಯಾ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2016, 19:30 IST
Last Updated 17 ಫೆಬ್ರುವರಿ 2016, 19:30 IST
ಪಟಿಯಾಲ ಹೌಸ್‌ ಕೋರ್ಟ್‌ಗೆ ಬುಧವಾರ ಕನ್ಹಯ್ಯಾ ಕುಮಾರ್‌ ಅವರನ್ನು ಬಿಗಿ ಭದ್ರತೆಯೊಂದಿಗೆ ಕರೆತರಲಾಯಿತು
ಪಟಿಯಾಲ ಹೌಸ್‌ ಕೋರ್ಟ್‌ಗೆ ಬುಧವಾರ ಕನ್ಹಯ್ಯಾ ಕುಮಾರ್‌ ಅವರನ್ನು ಬಿಗಿ ಭದ್ರತೆಯೊಂದಿಗೆ ಕರೆತರಲಾಯಿತು   

ನವದೆಹಲಿ (ಪಿಟಿಐ): ದೇಶದ್ರೋಹದ ಆರೋಪದ ಮೇಲೆ ಪೊಲೀಸ್‌ ಕಸ್ಟಡಿಯಲ್ಲಿದ್ದ ದೆಹಲಿ ಜವಾಹರಲಾಲ್‌ ನೆಹರೂ ವಿಶ್ವ­ವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಅವರನ್ನು ಬುಧವಾರ ಪಟಿಯಾಲ ಹೌಸ್‌ ಕೋರ್ಟ್‌ಗೆ ಹಾಜರುಪಡಿಸಿದಾಗ ನ್ಯಾಯಾಲಯ ಆವರಣ ಅಕ್ಷರಶಃ ರಣರಂಗವಾಯಿತು.

ಆರೋಪಿ ಸುರಕ್ಷತೆ ಬಗ್ಗೆ ಕಾಳಜಿ ವಹಿಸುವಂತೆ ಸ್ವತಃ  ಸುಪ್ರೀಂಕೋರ್ಟ್‌ ದೆಹಲಿ ಪೊಲೀಸರಿಗೆ ಆದೇಶಿಸಿದ್ದರೂ ವಕೀಲರ ಗುಂಪೊಂದು ಕನ್ಹಯ್ಯಾ ಕುಮಾರ್‌, ಅವರ ವಕೀಲರು ಮತ್ತು ಕೆಲವು ಪತ್ರಕರ್ತರು ಮೇಲೆ ಮತ್ತೆ ಹಲ್ಲೆ ನಡೆಸಿತು.

ಕನ್ಹಯ್ಯಾ ಅವರನ್ನು ಸೋಮವಾರ ಹಾಜರುಪಡಿಸಿದಾಗ ನ್ಯಾಯಾಲಯದಲ್ಲಿ ವಕೀಲರು ದಾಂದಲೆ ನಡೆಸಿದ್ದರು. ಹಾಗಾಗಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ದೆಹಲಿ ಪೊಲೀಸ್‌ ಆಯುಕ್ತ ಬಿ.ಎಸ್‌. ಬಸ್ಸಿ ಅವರಿಗೆ ಸುಪ್ರೀಂ ಕೋರ್ಟ್‌ ಬುಧವಾರ ಬೆಳಿಗ್ಗೆ  ನಿರ್ದೇಶನ ನೀಡಿತ್ತು. ಹೈಕೋರ್ಟ್‌ನ ರಿಜಿಸ್ಟ್ರಾರ್‌ ಅವರು ವಿಚಾರಣೆ ಸಂದರ್ಭದಲ್ಲಿ ಹಾಜರಿರುವಂತೆಯೂ ಸೂಚಿಸಲಾಗಿತ್ತು.

ಈ ಯಾವ ಕ್ರಮವೂ ಫಲ ನೀಡಲಿಲ್ಲ. ಗೂಂಡಾ ವಕೀಲರು ಕನ್ಹಯ್ಯಾ ಅವರನ್ನು ಥಳಿಸಿದರು, ಒದ್ದರು. ವಾಹನದಿಂದ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಈ ಘಟನೆ ನಡೆಯಿತು. ಕನ್ಹಯ್ಯಾ ಅವರ ಮುಖ ಮತ್ತು ಕಾಲುಗಳಿಗೆ ಗಾಯವಾಗಿವೆ ಎಂಬುದು ವೈದ್ಯಕೀಯ ತಪಾಸಣೆಯಲ್ಲಿ ತಿಳಿಯಿತು.

ಸುಪ್ರೀಂ ಕೋರ್ಟ್‌ ಗಮನಕ್ಕೆ: ವಕೀಲರ ಹಿಂಸಾ ಕೃತ್ಯಗಳು ನಡೆಯುತ್ತಿರುವಂತೆಯೇ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್‌, ಕಪಿಲ್‌ ಸಿಬಲ್‌, ಪ್ರಶಾಂತ್ ಭೂಷಣ್‌ ಇದನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಸುಪ್ರೀಂ ಕೋರ್ಟ್‌ ಪರಿಸ್ಥಿತಿಯ ಅವಲೋಕನ ನಡೆಸಲು ಆರು ಹಿರಿಯ ವಕೀಲರ ತಂಡವನ್ನು ಪಟಿಯಾಲ ಹೌಸ್‌ ಕೋರ್ಟ್‌ಗೆ ಕಳುಹಿಸಿತು. ಈ ತಂಡದಲ್ಲಿ ಸಿಬಲ್‌ ಅವರಲ್ಲದೆ, ರಾಜೀವ್‌ ಧವನ್‌, ದುಷ್ಯಂತ್‌ ದವೆ, ಎ.ಡಿ.ಎನ್‌. ರಾವ್‌, ಅಜಿತ್‌ ಕೆ. ಸಿನ್ಹಾ ಮತ್ತು ಹರೇನ್‌ ರಾವಲ್‌ ಇದ್ದರು.

ವಕೀಲರ ಸಮಿತಿಗೂ ಬೆದರಿಕೆ: ಭಾರಿ ಪೊಲೀಸ್ ಭದ್ರತೆಯಲ್ಲಿ ಪಟಿಯಾಲ ಹೌಸ್‌ ನ್ಯಾಯಾಲಯಕ್ಕೆ ಬಂದ ಸುಪ್ರೀಂ ಕೋರ್ಟ್ ವಕೀಲರ ತಂಡವನ್ನು ವಕೀಲರ ಗುಂಪು ಬಾಯಿಗೆ ಬಂದಂತೆ  ನಿಂದಿಸಿತು. ಅವರ ಮೇಲೆ ಹೂಕುಂಡ ಮತ್ತು ಕಲ್ಲುಗಳನ್ನು ತೂರಲಾಯಿತು. ವಕೀಲರ ತಂಡದಿಂದ ಮೌಖಿಕ ವರದಿ ಪಡೆದುಕೊಂಡ ಸುಪ್ರೀಂ ಕೋರ್ಟ್‌, ‘ಆರೋಪಿಯ ಸುರಕ್ಷತೆ ಸಂಪೂರ್ಣವಾಗಿ ಪೊಲೀಸ್‌ ಆಯುಕ್ತರ ಹೊಣೆಗಾರಿಕೆ’ ಎಂದು ಹೇಳಿತು.  ಈ ನಡುವೆ ಕನ್ಹಯ್ಯಾ ಕುಮಾರ್‌ ಅವರನ್ನು ಮಾರ್ಚ್‌ 2ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ತೀರ್ಪು ನೀಡಿದೆ.
*
ಕನ್ಹಯ್ಯಾ ಮೇಲೆ ಹಲ್ಲೆ ನಡೆದಿದೆ ಎಂದು ನಾನು ಭಾವಿಸುವುದಿಲ್ಲ. ತಳ್ಳಾಟ ಆಗಿತ್ತು. ಸಾಕಷ್ಟು ಪೊಲೀಸರಿದ್ದು ಪರಿಸ್ಥಿತಿ ನಿಭಾಯಿಸಿದ್ದಾರೆ.
– ಬಿ.ಎಸ್‌. ಬಸ್ಸಿ
ದೆಹಲಿ ಪೊಲೀಸ್‌ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.