ADVERTISEMENT

ಮರಣದಂಡನೆ: ಪರಿಶೀಲನೆ ಭರವಸೆ ನೀಡಿದ ‘ಸುಪ್ರೀಂ’

ಎಲ್ಲ ಪ್ರಕ್ರಿಯೆ ಬಳಿಕ ಅರ್ಜಿ ಸಲ್ಲಿಸಲು ಅಪರಾಧಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಮರಣದಂಡನೆ: ಪರಿಶೀಲನೆ ಭರವಸೆ ನೀಡಿದ ‘ಸುಪ್ರೀಂ’
ಮರಣದಂಡನೆ: ಪರಿಶೀಲನೆ ಭರವಸೆ ನೀಡಿದ ‘ಸುಪ್ರೀಂ’   

ನವದೆಹಲಿ: ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯ ಮುಂದಿರುವ ಎಲ್ಲ ಕಾನೂನು ಪ್ರಕ್ರಿಯೆಗಳು ಮುಗಿದ ನಂತರ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಮ್ಮೆ ಪ್ರಶ್ನಿಸಲು ಆ ಅಪರಾಧಿಗೆ ಅವಕಾಶ ನೀಡಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ಬೇಸಿಗೆ ರಜೆಯ ನಂತರ ಮೂವರು ನ್ಯಾಯಮೂರ್ತಿಗಳಿರುವ ನ್ಯಾಯಪೀಠವು ಈ ವಿಚಾರವನ್ನು ಪರಿಶೀಲಿಸಲಿದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ ಮತ್ತು ಸಂಜಯ್‌ ಕಿಶನ್‌ ಕೌಲ್‌ ಅವರಿದ್ದ ರಜಾ ಕಾಲದ ಪೀಠ ಹೇಳಿದೆ.

ಗಲ್ಲು ಶಿಕ್ಷೆ ಜಾರಿಗೆ ತಡೆ ನೀಡಬೇಕು ಎಂದು ಮನವಿ ಮಾಡಿ ಬಾಬು ಅಲಿಯಾಸ್‌ ಕೇತನ್‌ ಮತ್ತು ಸನ್ನಿ ಅಲಿಯಾಸ್‌ ದೇವೇಂದ್ರ ಎಂಬುವವರು ಸುಪ್ರೀಂ  ಕೋರ್ಟ್‌ಗೆ ಮನವಿ ಮಾಡಿದ್ದರು.

ADVERTISEMENT

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಲ್ಮಾನ್‌ ಖುರ್ಷಿದ್‌, ಇಬ್ಬರ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಮೇ 25ರಂದು ತಿರಸ್ಕರಿಸಿದ್ದಾರೆ.  ಯಾವುದೇ ಸಮಯದಲ್ಲಿ ಅವರ ವಿರುದ್ಧ ಶಿಕ್ಷೆ ಜಾರಿಗೆ ವಾರಂಟ್‌ ಜಾರಿಯಾಗಬಹುದು. ಹಾಗಾಗಿ, ಈ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗಳು ಇಂತಹ ಅರ್ಜಿ ಸಲ್ಲಿಸಿದ ತಕ್ಷಣ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ ಜೈಲಿನ ಆಡಳಿತಕ್ಕೆ ಈ ಬಗ್ಗೆ ಮಾಹಿತಿ ನೀಡುತ್ತದೆ. ಆದ್ದರಿಂದ ಶಿಕ್ಷೆ ಜಾರಿಯ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಮರಣದಂಡನೆಗೆ ಗುರಿಯಾಗಿರುವ ಕೈದಿ ಸಲ್ಲಿಸುವ ಮೇಲ್ಮನವಿ, ಪುನರ್‌ಪರಿಶೀಲನಾ ಮತ್ತು ಪರಿಹಾರಾತ್ಮಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದ ಬಳಿಕ ಆ ಕೈದಿಯು ಹೊಸದಾಗಿ ರಿಟ್‌ ಅರ್ಜಿ ಸಲ್ಲಿಸಬಹುದೇ ಎಂಬ ವಿಷಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಮೂವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ ಈ ಹಿಂದೆ ವಿಚಾರಣೆ ನಡೆಸಿತ್ತು ಎಂದೂ  ನ್ಯಾಯಪೀಠ ಹೇಳಿದೆ.

2012ರಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಕ್ಕಾಗಿ ಇಂದೋರ್‌ನ ನ್ಯಾಯಾಲಯವೊಂದು ಬಾಬು, ಸನ್ನಿ ಮತ್ತು ಮತ್ತೊಬ್ಬನಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.

ಈ ಆದೇಶವನ್ನು 2014ರಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ ಮತ್ತು 2015ರ ಜನವರಿಯಲ್ಲಿ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.