ADVERTISEMENT

ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಗ್ಯಾ ಸಿಂಗ್‌ಗೆ ಜಾಮೀನು, ಪುರೋಹಿತ್‌ಗಿಲ್ಲ

ಏಜೆನ್ಸೀಸ್
Published 25 ಏಪ್ರಿಲ್ 2017, 7:47 IST
Last Updated 25 ಏಪ್ರಿಲ್ 2017, 7:47 IST
ಪ್ರಗ್ಯಾ ಸಿಂಗ್ ಠಾಕೂರ್‌ (ಸಾಂದರ್ಭಿಕ ಚಿತ್ರ)
ಪ್ರಗ್ಯಾ ಸಿಂಗ್ ಠಾಕೂರ್‌ (ಸಾಂದರ್ಭಿಕ ಚಿತ್ರ)   

ಮುಂಬೈ: ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಗ್ಯಾ ಸಿಂಗ್ ಠಾಕೂರ್‌ಗೆ ಬಾಂಬೆ ಹೈಕೋರ್ಟ್‌ ಮಂಗಳವಾರ ಜಾಮೀನು ನೀಡಿದೆ. ಮತ್ತೊಬ್ಬ ಆರೋಪಿ, ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಠಾಕೂರ್ ವಿರುದ್ಧದ ಆರೋಪಗಳಿಗೆ ಪ್ರಾಥಮಿಕ ಸಾಕ್ಷ್ಯಗಳು ದೊರೆತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಜಾಮೀನು ಪಡೆಯಲು ₹ 5 ಲಕ್ಷ ನಗದು ಠೇವಣಿ ಇರಿಸುವಂತೆಯೂ ಠಾಕೂರ್‌ ಅವರಿಗೆ ಸೂಚಿಸಿದೆ.

ಪಾಸ್‌ಪೋರ್ಟನ್ನು ರಾಷ್ಟ್ರೀಯ ತನಿಖಾ ದಳದ ವಶಕ್ಕೊಪ್ಪಿಸುವಂತೆಯೂ ಅವಶ್ಯವಿದ್ದಾಗಲೆಲ್ಲ ತನಿಖೆಗೆ ಹಾಜರಾಗುವಂತೆಯೂ ನ್ಯಾಯಾಲಯ ಠಾಕೂರ್‌ಗೆ ನಿರ್ದೇಶಿಸಿದೆ.

ADVERTISEMENT

2008ರಲ್ಲಿ ಮಾಲೆಗಾಂವ್‌ನಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ 6 ಮಂದಿ ಮೃತಪಟ್ಟಿದ್ದರು. ಪ್ರಗ್ಯಾ ಹಾಗೂ ಪುರೋಹಿತ್ ಅವರನ್ನು ಪ್ರಕರಣದ ಪ್ರಮುಖ ಆರೋಪಿಗಳನ್ನಾಗಿ ಪರಿಗಣಿಸಲಾಗಿತ್ತು.

ಇಬ್ಬರೂ ಆರೋಪಿಗಳು ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಫೆಬ್ರುವರಿಯಲ್ಲಿ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.

ಠಾಕೂರ್ ವಿರುದ್ಧ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲವೆಂದೂ ಅವರ ವಿರುದ್ಧದ ವಿಚಾರಣೆಯನ್ನು ಕೈಬಿಡಬಹುದು ಎಂದು ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯಕ್ಕೆ ತಿಳಿಸಿತ್ತು. ಅಲ್ಲದೆ, ಅವರಿಗೆ ಜಾಮೀನು ನೀಡುವುದಕ್ಕೆ ಅಭ್ಯಂತರವಿಲ್ಲ ಎಂದೂ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.