ADVERTISEMENT

ಮೂವರು ತಪ್ಪಿತಸ್ಥರು: ಕೋರ್ಟ್‌ ಘೋಷಣೆ

ಪತ್ರಿಕಾ ಛಾಯಾಗ್ರಾಹಕಿ ಮೇಲೆ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 19:30 IST
Last Updated 3 ಏಪ್ರಿಲ್ 2014, 19:30 IST

ಮುಂಬೈ (ಪಿಟಿಐ): ಶಕ್ತಿ ಮಿಲ್ಸ್‌ ಪ್ರದೇಶದಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಮೂವರನ್ನು ತಪ್ಪಿತಸ್ಥರೆಂದು ಸೆಷನ್ಸ್‌ ಕೋರ್ಟ್‌  ಗುರುವಾರ ಘೋಷಿಸಿದೆ.

ಅಪರಾಧ ಪುನರಾವರ್ತನೆಗಾಗಿ  ಭಾರತೀಯ ದಂಡ ಸಂಹಿತೆ ತಿದ್ದುಪಡಿ ಸೆಕ್ಷನ್‌ ಪ್ರಕಾರ ಈ ಮೂವರಿಗೆ ಗಲ್ಲು ಶಿಕ್ಷೆ ನೀಡುವ ಅವಕಾಶ ಇದೆ.

ಸೆಕ್ಷನ್‌ 376(ಇ) ಪ್ರಕಾರ ವಿಜಯ್‌ ಜಾಧವ್‌ (19), ಕಾಸಿಂ ಬೆಂಗಾಳಿ (21) ಹಾಗೂ ಮೊಹಮ್ಮದ್‌ ಸಲೀಂ ಅನ್ಸಾರಿ (28)ತಪ್ಪಿತಸ್ಥರೆಂದು ಪ್ರಧಾನ ಸೆಷನ್ಸ್‌ ನ್ಯಾಯಾಧೀಶೆ ಶಾಲಿನಿ ಫನ್ಸಾಲ್ಕರ್‌ ಜೋಷಿ ಹೇಳಿದರು.

ಶಕ್ತಿ ಮಿಲ್ಸ್‌ ಪ್ರದೇಶದಲ್ಲಿ ಟೆಲಿಫೋನ್‌ ಆಪರೇಟರ್‌ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿಯೂ ಈ ಮೂವರನ್ನು ತಪ್ಪಿತಸ್ಥರೆಂದು ಕೋರ್ಟ್‌ ಘೋಷಿಸಿತ್ತು. ಅಲ್ಲದೇ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

2012ರಲ್ಲಿ ರಾಜಧಾನಿ ದೆಹಲಿಯಲ್ಲಿ ಪ್ಯಾರಾಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಸೆಕ್ಷನ್‌ 376( ಇ)ಗೆ ತಿದ್ದುಪಡಿ ತರಲಾಯಿತು. ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಕೋರ್ಟ್‌ ಶುಕ್ರವಾರ ಪ್ರಕಟಿಸುವ ನಿರೀಕ್ಷೆ ಇದೆ.

ಸೆಕ್ಷನ್‌ 376 (ಇ) ಪ್ರಕಾರ ಈ ಮೂವರ ಮೇಲೆ ಕಳೆದ ತಿಂಗಳು ನ್ಯಾಯಾಲಯವು ಹೆಚ್ಚುವರಿ ಆರೋಪ  ನಿಗದಿ ಮಾಡಿತ್ತು.
2013ರ ಜುಲೈನಲ್ಲಿ  ಶಕ್ತಿ ಮಿಲ್ಸ್‌ ಪ್ರದೇಶದಲ್ಲಿ 18 ವರ್ಷದ ಟೆಲಿಫೋನ್‌ ಆಪರೇಟರ್‌ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅದೇ ವರ್ಷ  ಆಗಸ್ಟ್‌ 22ರಂದು ಇದೇ ಸ್ಥಳದಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ವಿಜಯ್‌ ಜಾಧವ್‌, ಕಾಸಿಂ ಬೆಂಗಾಳಿ, ಸಲೀಂ ಅನ್ಸಾರಿ, ಸಿರಾಜ್‌ ರೆಹಮಾನ್‌ ಅತ್ಯಾಚಾರ ಎಸಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.