ADVERTISEMENT

ಮೊದಲ ಕಂತಿನಲ್ಲಿ ಬಿಎಸ್‌ವೈ ಅಥವಾ ಅನಂತ್‌

ನರೇಂದ್ರ ಮೋದಿ ಸಂಪುಟದಲ್ಲಿ ರಾಜ್ಯಕ್ಕೆ ಪ್ರಾತಿನಿಧ್ಯ

​ಪ್ರಜಾವಾಣಿ ವಾರ್ತೆ
Published 21 ಮೇ 2014, 20:19 IST
Last Updated 21 ಮೇ 2014, 20:19 IST

ನವದೆಹಲಿ: ರಾಜ್ಯ ಬಿಜೆಪಿ ನಾಯಕರಾದ ಬಿ.ಎಸ್‌. ಯಡಿಯೂರಪ್ಪ ಅಥವಾ ಅನಂತ ಕುಮಾರ್‌ ಇಬ್ಬರಲ್ಲಿ ಯಾರಾದರೂ ಒಬ್ಬರು ಮೊದಲಿಗೆ ನರೇಂದ್ರ ಮೋದಿ ಅವರ ಸಂಪುಟ ಸೇರುವ ಸಂಭವವಿದೆ.

ಗುಜರಾತಿನ ಮಾದರಿಯಲ್ಲಿ ಚಿಕ್ಕ ಸಂಪುಟ ಹೊಂದುವ ಆಲೋಚನೆ ನಿಯೋಜಿತ ಪ್ರಧಾನಿಗೆ ಇದ್ದಂತಿದೆ.  ಪ್ರತಿಯೊಬ್ಬ ಸಚಿವರಿಗೆ  ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಎರಡು, ಅಥವಾ ಮೂರು ಖಾತೆಗಳನ್ನು ಹಂಚಿಕೆ ಮಾಡಲಿದ್ದಾರೆ. ದಕ್ಷರಾಗಿರುವ ಅಧಿಕಾರಿಗಳನ್ನು ಹೆಕ್ಕಿ ತೆಗೆದು, ಹೊಣೆಗಾರಿಕೆ ವಹಿಸಲಿದ್ದಾರೆ ಎಂದು ಉನ್ನತ ಬಿಜೆಪಿ ಮೂಲಗಳು ತಿಳಿಸಿವೆ.

ಮೋದಿ ಸಂಪುಟದಲ್ಲಿ ಸ್ಥಾನ ಪಡೆಯಲು ಅನೇಕರು ಕಸರತ್ತು ನಡೆಸಿದ್ದಾರೆ. ಯಡಿಯೂರಪ್ಪ, ಸದಾನಂದಗೌಡ, ಅನಂತಕುಮಾರ್‌ ಹೆಸರು ಮುಖ್ಯವಾಗಿ ಕೇಳಿ ಬರುತ್ತಿದೆ. ಆದರೆ, ಬುಧವಾರ ಬೆಳಿಗ್ಗೆ ಬಿಜೆಪಿ ವರಿಷ್ಠರು ರಾಜ್ಯದ ನಾಯಕರಿಗೆ ಯಡಿಯೂರಪ್ಪ ಇಲ್ಲವೆ ಅನಂತ ಕುಮಾರ್‌ ಅವರಲ್ಲಿ ಯಾರಾದರೂ ಒಬ್ಬರು ಮೊದಲು ಸಂಪುಟ ಸೇರಲಿದ್ದಾರೆಂದು ಸುಳಿವು ನೀಡಿದ್ದಾರೆ.

ಈಗ  ಗುಜರಾತಿನಲ್ಲಿರುವ ಭಾವಿ ಪ್ರಧಾನಿ ಗುರುವಾರ ರಾಜಧಾನಿಗೆ ಹಿಂತಿರುಗಲಿದ್ದಾರೆ. ಅನಂತರ ಸಂಪುಟ ಸೇರುವ ಸಚಿವರ ಹೆಸರು ಅಂತಿಮಗೊಳ್ಳಲಿದೆ. ಮೋದಿ ಈಗಾಗಲೇ ತಮ್ಮ ಸಂಪುಟ ಸದಸ್ಯರ ಪಟ್ಟಿ ಸಿದ್ಧಪಡಿಸಿದ್ದಾರೆ. ಇನ್ನು ಉಳಿದಿರುವುದು ‘ಸಮಾಲೋಚನೆ’ ಎನ್ನುವ ಔಪಚಾರಿಕ ಪ್ರಕ್ರಿಯೆ ಮಾತ್ರ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ರಾಜ್ಯದ ಸಂಸದರ ನಿಯೋಗ ಈಚೆಗೆ ದೆಹಲಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಿ, ‘ದಕ್ಷಿಣದಲ್ಲಿ ಕರ್ನಾಟಕ ಅತಿ ಹೆಚ್ಚು ಸದಸ್ಯರನ್ನು ಲೋಕಸಭೆಗೆ ಚುನಾಯಿಸಿದೆ. ಈ ಕಾರಣದಿಂದ ಸಂಪುಟದಲ್ಲಿ ಹೆಚ್ಚು ಪ್ರಾತಿನಿಧ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿತ್ತು. ಇದನ್ನು ಆಲಿಸಿದ ಮೋದಿ, ಎಲ್ಲರಿಗೂ ಸಂಪುಟದಲ್ಲಿ ಅವಕಾಶ ಕಲ್ಪಿಸುವುದು ಕಷ್ಟ. ಕೆಲವರು ಪಕ್ಷದಲ್ಲೂ ಕೆಲಸ ಮಾಡಬೇಕಾಗುತ್ತದೆ ಎಂದು ನೇರವಾಗಿ ಹೇಳಿದರು ಎಂದು ಮೂಲಗಳು ವಿವರಿಸಿವೆ.

ಅಭಯ: ಯಡಿಯೂರಪ್ಪನವರ ಜತೆ ಆತ್ಮೀಯವಾಗಿ ಮಾತನಾಡಿದ ಮೋದಿ, ‘ನಿಮ್ಮ ವಿರುದ್ಧದ ಮೊಕದ್ದಮೆ (ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ್ದು) ಕುರಿತು ಅಧ್ಯಯನ ಮಾಡಿದ್ದೇನೆ. ಅದರಲ್ಲಿ ಏನೂ ಹುರುಳಿಲ್ಲ. ಏಕೆ ಲೋಕಾಯುಕ್ತ ಮತ್ತು ಸಿಬಿಐಗೆ ಕೊಡಲಾಯಿತು’ ಎಂದು ಅಚ್ಚರಿ ವ್ಯಕ್ತಪಡಿಸಿದರು. ಆ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ ಎಂದು ಅಭಯ ನೀಡಿದರು ಎನ್ನಲಾಗಿದೆ.

ಬಿಜೆಪಿ ತೊರೆದಿದ್ದ ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮರಳಿ ಕರೆತರುವಲ್ಲಿ ಮೋದಿ ಮಹತ್ವದ ಪಾತ್ರ ವಹಿಸಿದ್ದರು. ಮೋದಿ ಪರ ಯಡಿಯೂರಪ್ಪ ಮೊದಲಿಂದಲೂ ವಕಾಲತ್ತು ವಹಿಸಿದ್ದಾರೆ. ಸಂಪುಟದಲ್ಲಿ ಬಿಎಸ್‌ವೈಗೆ ಪ್ರಾತಿನಿಧ್ಯ ಕಲ್ಪಿಸಲು ಮೋದಿ ಅವರಿಗೆ ಆಸಕ್ತಿ ಇದೆ. ಆದರೆ, ತಕ್ಷಣಕ್ಕೆ ಅವರು ಸಂಪುಟ ಸೇರುವರೇ ಅಥವಾ ಆರೋಪ ಪ್ರಕರಣಗಳು ಇತ್ಯರ್ಥ ಆಗುವವರೆಗೂ ಕಾಯುವರೇ ಎನ್ನುವುದಷ್ಟೇ ಪ್ರಶ್ನೆ. ಇದು ಮೋದಿ ಅವರ ತೀರ್ಮಾನವನ್ನು ಅವಲಂಬಿಸಿದೆ.

ಉಳಿದಂತೆ ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌, ಮುರಳಿ ಮನೋಹರ ಜೋಷಿ, ನಿತಿನ್‌ ಗಡ್ಕರಿ, ರಾಜನಾಥ್‌ಸಿಂಗ್‌ ಅವರು ಸಂಪುಟ ಸೇರುವುದು ಬಹುತೇಕ ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.