ADVERTISEMENT

ಮೋದಿ ಪಾತ್ರ: ಪಣಜಿ ಸಭೆಯಲ್ಲಿ ಪ್ರಧಾನ ಚರ್ಚೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST
ಸಾಂದರ್ಭಿಕ ಚಿತ್ರ  - ಪಿಟಿಐ ಚಿತ್ರ
ಸಾಂದರ್ಭಿಕ ಚಿತ್ರ - ಪಿಟಿಐ ಚಿತ್ರ   

ನವದೆಹಲಿ(ಪಿಟಿಐ):  ಗೋವಾದ ಪಣಜಿಯಲ್ಲಿ ಶುಕ್ರವಾರ ಆರಂಭವಾಗುವ ಮೂರು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ಸಂದರ್ಭ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಹಿಸಬೇಕಾದ ಪಾತ್ರದ ಕುರಿತು ಸ್ಪಷ್ಟ ಸಂದೇಶ ರವಾನೆಯಾಗುವ ಸಾಧ್ಯತೆಗಳಿವೆ.

ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮೋದಿ ಅವರನ್ನು ನೇಮಿಸುವ ಕುರಿತು ಬಿಜೆಪಿಯ ಕೆಲ ಮುಖಂಡರು ತೀವ್ರ ಒತ್ತಡ ತರುತ್ತಿರುವ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದು ಪಕ್ಷದ ವಕ್ತಾರ ರಾಜೀವ್ ಪ್ರತಾಪ್ ರೂಡಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಮೋದಿ ಅವರನ್ನೇ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ಕಾರ್ಯಕಾರಿಣಿಯಲ್ಲಿ ಕೆಲವು ನಾಯಕರು ಬೇಡಿಕೆ ಇಡುವ ಸಾಧ್ಯತೆ ಇದ್ದರೂ ಈ ಕುರಿತು ಪಕ್ಷದ ವರಿಷ್ಠರಲ್ಲಿ ಇನ್ನೂ ಸರ್ವಸಮ್ಮತ ಅಭಿಪ್ರಾಯ ಮೂಡಿಬಂದಿಲ್ಲ. ಆದಾಗ್ಯೂ ಈ ಕುರಿತು ಎದ್ದಿರುವ ಗೊಂದಲಗಳಿಗೆ ತೆರೆ ಎಳೆಯಲು ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್ ಸ್ಪಷ್ಟ ಸಂದೇಶ ನೀಡುವ ಸಾಧ್ಯತೆ ಇದ್ದು ಇಂತಹ ಘೋಷಣೆ ಮಾಡುವುದಕ್ಕೂ ಮುನ್ನ ಪಕ್ಷದ ಹಿರಿಯ ನಾಯಕರಲ್ಲದೆ ಸಂಸದೀಯ ಮಂಡಳಿ ಸದಸ್ಯರೊಂದಿಗೆ ಅವರು ಇದೀಗ ಸಮಾಲೋಚನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುತ್ತಿರುವ ಮೋದಿಯ ಕೆಲ ಕಟ್ಟಾ ಬೆಂಬಲಿಗರು, ಮೋದಿ ಅವರನ್ನೇ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ಬಹಿರಂಗ ಬೇಡಿಕೆ ಮಂಡಿಸುವ ಆತಂಕವೂ ಕೆಲ ಮುಖಂಡರಲ್ಲಿದೆ.

ಸಿನ್ಹಾ ನಿರಾಕರಣೆ: ಆದರೆ ಪಣಜಿ ಸಭೆಯಲ್ಲಿ ಮೋದಿ ಅವರ ಪಾತ್ರದ ಕುರಿತು ಯಾವುದೇ ಘೋಷಣೆ ಹೊರಬೀಳುವ ಸಾಧ್ಯತೆ ಇಲ್ಲ ಎಂದಿರುವ ಪಕ್ಷದ ಹಿರಿಯ ಮುಖಂಡ ಯಶವಂತ ಸಿನ್ಹಾ `ನಾಯಕತ್ವದ ಕುರಿತು ಘೋಷಣೆ ಮಾಡಲು ಕಾರ್ಯಕಾರಿಣಿಯಂತಹ ಬೃಹತ್ ಸಮಾವೇಶ ಸೂಕ್ತ ಅಲ್ಲ' ಎಂದಿದ್ದಾರೆ.

ನಾಯಕತ್ವ ವಿಷಯದಂತಹ ಘೋಷಣೆಗಳನ್ನು ಪಕ್ಷದ ಸಂಸದೀಯ ಮಂಡಳಿಯೇ ನಿರ್ಣಯಿಸುತ್ತದೆ ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.