ADVERTISEMENT

ಮೋದಿ ಸೂಟ್‌ ರೂ10 ಲಕ್ಷ: ರಾಹುಲ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 19:54 IST
Last Updated 29 ಜನವರಿ 2015, 19:54 IST

ನವದೆಹಲಿ: ಜಮ್ಮು–ಕಾಶ್ಮೀರ ಮತ್ತು ಜಾರ್ಖಂಡ್‌ ಚುನಾವಣೆ ಸೋಲಿನ ಬಳಿಕ ಮೈಕೊಡವಿ ಎದ್ದಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಗುರುವಾರ ದೆಹಲಿ ವಿಧಾನ­ಸಭೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿ, ರಾಜಧಾನಿ ಅಭಿವೃದ್ಧಿ ಚಿತ್ರಣ ಬದ­ಲಾಗಲು ತಮ್ಮ ಪಕ್ಷವನ್ನು ಬೆಂಬ­ಲಿ­­ಸುವಂತೆ ಮತದಾರರಿಗೆ ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್‌ ಕಟುವಾಗಿ ಟೀಕಿಸಿದರು. ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರ ಜತೆ ನಡೆಸಿದ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಹತ್ತು ಲಕ್ಷ ರೂಪಾಯಿ ಮೌಲ್ಯದ ಸೂಟ್‌ ಧರಿಸಿದ್ದರು ಎಂದು ಲೇವಡಿ ಮಾಡಿದರು.

ನಿರೀಕ್ಷೆಗೂ ಮೀರಿ ಸೇರಿದ್ದ ಜನ ಸಮುದಾಯ ರಾಹುಲ್‌ ಕೇಳಿದ ಪ್ರಶ್ನೆಗಳಿಗೆ ಅತ್ಯಂತ ಉತ್ಸಾಹದಿಂದ ಪ್ರತಿಕ್ರಿಯಿಸಿತು. ಬೆರಳೆಣಿಕೆ ಉದ್ಯಮಿ­ಗಳಿಗೆ ಲಾಭ ಮಾಡಿಕೊಡಲು  ಎನ್‌­ಡಿಎ ಸರ್ಕಾರ ಬಡವರನ್ನು ಕಡೆಗಣಿ­ಸುತ್ತಿದೆ ಎಂದು ಅವರು ಆರೋಪಿಸಿದರು.

‘ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವುದಾಗಿ ಮೋದಿ ಭರವಸೆ ಕೊಟ್ಟಿದ್ದರು. ನಿಮ್ಮ ಖಾತೆಗಳಿಗೆ ಹಣ ಬಂದಿದೆಯೇ?’ ಎಂದು ರಾಹುಲ್‌ ಗಾಂಧಿ ಕೇಳಿದರು. ಸಭೆಯಲ್ಲಿದ್ದವರು ಇಲ್ಲ, ಇಲ್ಲ ಎಂದು ಕೂಗಿದರು. ವಿದೇಶದಲ್ಲಿರುವ ಕಪ್ಪು ಹಣ ತರುವುದಾಗಿ ಭರವಸೆ ನೀಡಿದ್ದ ಪ್ರಧಾನಿ ಕೊಟ್ಟ ಮಾತು ತಪ್ಪಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.