ADVERTISEMENT

ಯುವಕನನ್ನು ಜೀಪ್‌ಗೆ ಕಟ್ಟಿದ್ದ ಮೇಜರ್‌ಗೆ ಸೇನಾ ಮುಖ್ಯಸ್ಥರ ‘ಮೆಚ್ಚುಗೆ ಪತ್ರ’ದ ಗೌರವ

ಏಜೆನ್ಸೀಸ್
Published 22 ಮೇ 2017, 16:55 IST
Last Updated 22 ಮೇ 2017, 16:55 IST
ಜೀಪ್‌ಗೆ ಕಟ್ಟಿದ್ದ ಯುವಕ – ಮೇಜರ್‌ ಲೀತುಲ್‌ ಗೊಗೊಯ್‌
ಜೀಪ್‌ಗೆ ಕಟ್ಟಿದ್ದ ಯುವಕ – ಮೇಜರ್‌ ಲೀತುಲ್‌ ಗೊಗೊಯ್‌   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನಾಕಾರರು ಸೇನೆಯ ವಾಹನಗಳ ಮೇಲೆ ಕಲ್ಲು ತೂರುವುದನ್ನು ತಡೆಯಲು ಯುವಕನೊಬ್ಬನನ್ನು ಜೀಪ್‌ಗೆ ಕಟ್ಟಿದ್ದ ಸೇನಾಧಿಕಾರಿ ಮೇಜರ್‌ ಲೀತುಲ್‌ ಗೊಗೊಯ್‌ ಅವರಿಗೆ ಸೇನಾ ಮುಖ್ಯಸ್ಥರ ‘ಮೆಚ್ಚುಗೆ ಪತ್ರ’ದ ಗೌರವ ದೊರಕಿದೆ.

‘ಗಲಭೆ ನಿಯಂತ್ರಣ ಕಾರ್ಯಾಚರಣೆಗಳಲ್ಲಿ ಗೊಗೊಯ್‌ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಸೇನಾ ಮುಖ್ಯಸ್ಥರ ಮೆಚ್ಚುಗೆ ಪತ್ರ (Chief of Army Staff's Commendation Card) ನೀಡಲಾಗಿದೆ’ ಎಂದು ಸೇನಾ ವಕ್ತಾರ ಅಮನ್‌ ಆನಂದ್‌ ತಿಳಿಸಿದ್ದಾರೆ.

‘ಯುವಕನನ್ನು ಜೀಪ್‌ಗೆ ಕಟ್ಟಿದ್ದ ಪ್ರಕರಣದಲ್ಲಿ ಗೊಗೊಯ್‌ ಅವರಿಗೆ ಈ ಮೆಚ್ಚುಗೆ ಪತ್ರ ನೀಡಲಾಗಿದೆಯೇ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಮನ್‌ ಆನಂದ್‌, ‘ಗೊಗೊಯ್‌ ಅವರ ಒಟ್ಟಾರೆ ಸೇವೆಯನ್ನು ಗುರುತಿಸಿ ಈ ಪತ್ರ ನೀಡಲಾಗಿದೆ’ ಎಂದಿದ್ದಾರೆ.

ADVERTISEMENT

ಸೇನೆಯ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಇತ್ತೀಚೆಗೆ ಜಮ್ಮು– ಕಾಶ್ಮೀರಕ್ಕೆ ಭೇಟಿ ನೀಡಿದ್ದ ವೇಳೆ ಗೊಗೊಯ್‌ ಅವರಿಗೆ ಈ ಮೆಚ್ಚುಗೆ ಪತ್ರ ಪ್ರದಾನ ಮಾಡಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಗೊಗೊಯ್‌ ಅವರು 53 ರಾಷ್ಟ್ರೀಯ ರೈಫಲ್ಸ್‌ನಲ್ಲಿ ಮೇಜರ್‌ ಆಗಿದ್ದಾರೆ.

ಏಪ್ರಿಲ್‌ 9ರಂದು ಶ್ರೀನಗರ ಲೋಕಸಭೆಗೆ ನಡೆದಿದ್ದ ಉಪಚುನಾವಣೆ ವೇಳೆ ಪ್ರತಿಭಟನಾಕಾರರು ಸೇನೆಯ ವಾಹನಗಳ ಮೇಲೆ ಕಲ್ಲು ತೂರಬಾರದೆಂದು ಜೀಪ್‌ನ ಬಾನೆಟ್‌ಗೆ ಯುವಕನನ್ನು ‘ಮಾನವ ತಡೆಗೋಡೆ’ಯಂತೆ ಕಟ್ಟಿದ್ದ ವಿಡಿಯೊ ವೈರಲ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.