ADVERTISEMENT

ಯೋಗಶಿಬಿರಗಳ ನಿಷೇಧ, ಕೋರ್ಟಿಗೆ ಹೋಗುವೆ: ಬಾಬಾ

ಉತ್ತರ ಪ್ರದೇಶ, ಹಿಮಾಚಲ, ಮಹಾರಾಷ್ಟ್ರ, ರಾಜಸ್ತಾನದಲ್ಲೂ ಕ್ರಮ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2014, 13:20 IST
Last Updated 28 ಏಪ್ರಿಲ್ 2014, 13:20 IST

ಶಿಮ್ಲಾ/ ನಾಗಪುರ (ಪಿಟಿಐ): ರಾಹುಲ್ ಗಾಂಧಿಯವರನ್ನು ಗುರಿಯಾಗಿಟ್ಟುಕೊಂಡು ನೀಡಿದ 'ಹನಿಮೂನ್' ಹೇಳಿಕೆಗಾಗಿ ಉತ್ತರ ಪ್ರದೇಶ ಅಧಿಕಾರಿಗಳು ಯೋಗ ಗುರು ಬಾಬಾ ರಾಮದೇವ್ ವಿರುದ್ಧ ಕ್ರಮ ಕೈಗೊಂಡ ಬಳಿಕ, ಸೋಮವಾರ ಹಿಮಾಚಲ ಪ್ರದೇಶವು ಅವರ ಯೋಗ ಶಿಬಿರಗಳನ್ನು ನಿಷೇಧಿಸಿದೆ.

ಮಹಾರಾಷ್ಟ್ರ ಮತ್ತು ರಾಜಸ್ತಾನದಲ್ಲೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆಯಡಿಯಲ್ಲಿ ರಾಮದೇವ್ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಏನಿದ್ದರೂ ಈ ಕ್ರಮಗಳ ವಿರುದ್ಧ ತಾವು ನ್ಯಾಯಾಲಯದ ಕಟ್ಟೆ ಏರುವುದಾಗಿ ಬಾಬಾ ರಾಮದೇವ್ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಯೋಗ ಶಿಬಿರಗಳನ್ನು ನಿಷೇಧಿಸಿದ ಕ್ರಮವನ್ನು ಪ್ರಜಾಪ್ರಭುತ್ವ ವಿರೋಧಿ ಎಂಬುದಾಗಿ ಬಣ್ಣಿಸಿದ ರಾಮದೇವ್ ಅವರು, ರಾಹುಲ್ ಗಾಂಧಿ ವಿರುದ್ಧ ತಾವು ನೀಡಿದ್ದ ಹೇಳಿಕೆಯನ್ನು ಓಟ್ ಬ್ಯಾಂಕ್ ರಾಜಕೀಯಕ್ಕಾಗಿ' ದಲಿತ ವಿರೋಧಿ ಎಂಬುದಾಗಿ ತಿರುಚಿರುವ ಕಾಂಗ್ರೆಸ್ ತಮ್ಮ ಯೋಗ ಶಿಬಿರಗಳ ದಮನಕ್ಕಾಗಿ ಸರ್ಕಾರದ ಮೂಲಕ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಿದೆ ಎಂದು ದೂರಿದರು.

ಚುನಾವಣಾ ಆಯೋಗದ ನಿರ್ದೇಶನಗಳ ಮೇರೆಗೆ ಯೋಗ ಶಿಬಿರಗಳಂತಹ ರಾಜಕೀಯೇತರ ಕಾರ್ಯಕ್ರಮಗಳ ಮೂಲಕ ರಾಜಕೀಯ ಚಟುವಟಿಕೆ ನಡೆಸದಂತೆ ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ನೀಡಿರುವ ನಿರ್ದೇಶನಗಳ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಯೋಗ ಶಿಬಿರ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ನರೀಂದರ್ ಚೌಹಾಣ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.