ADVERTISEMENT

ರೈತರ ಹಿತ ಕಾಯದ ಸರ್ಕಾರ: ರಾಹುಲ್ ಟೀಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2015, 14:10 IST
Last Updated 20 ಏಪ್ರಿಲ್ 2015, 14:10 IST

ನವದೆಹಲಿ(ಪಿಟಿಐ): ಆಡಳಿತಾರೂಢ ಕೇಂದ್ರ ಸರ್ಕಾರ ಸಮಸ್ಯೆಗಳ ಸುಳಿಯಲ್ಲಿರುವ ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಚಾಟಿ ಬೀಸಿದರು.

ಸಂಸತ್ತಿನಲ್ಲಿ ಸೋಮವಾರ ನಡೆದ ಬಜೆಟ್ ಅಧಿವೇಶನದ ಎರಡನೇ ಹಂತದ ಚರ್ಚೆ ವೇಳೆ ತಮ್ಮ ಮೊದಲ ಭಾಷಣ ಮಾಡಿದ ರಾಹುಲ್, ಸರ್ಕಾರ ರೈತ ಸಮುದಾಯವನ್ನು ಕಡೆಗಣಿಸಿ, ಉದ್ಯಮಿಗಳ ಪರವಾಗಿದೆ. ಭವಿಷ್ಯದಲ್ಲಿ ರೈತರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ನುಡಿದರು.

‘ಭಾರತಕ್ಕೆ ಒಳ್ಳೆ ದಿನ ಬರುತ್ತದೆ’ ಎಂಬ ಸರ್ಕಾರದ ಆಶಯ ರೈತ ವಿರೋಧಿ ಕಾರ್ಯದ ಮೂಲಕ ಕೊಚ್ಚಿ ಹೋಗಿದೆ. ರಾಷ್ಟ್ರದ ಅಭ್ಯುದಯದಲ್ಲಿ ರೈತರೇ ಅಡಿಪಾಯ. ಸರ್ಕಾರ ಈ ರೈತರನ್ನೇ ಕಡೆಗಣಿಸುತ್ತಿದೆ ಎಂದು ಅವರು ಆರೋಪಿಸಿದರು.

‘ನಾನು ಪ್ರಧಾನಿ ಅವರಿಗೆ ಸಲಹೆ ನೀಡಲು ಬಯಸುತ್ತೇನೆ’ ಎಂದ ರಾಹುಲ್, ‘ಜನಸಂಖ್ಯೆಯ ಶೇ 67ಕ್ಕೂ ಅಧಿಕ ರೈತ ಸಮುದಾಯವಿದೆ. ಇವರು ನಿಮ್ಮ ರಾಜಕೀಯ ಸ್ಥಿರತೆಯನ್ನೇ ತಲೆಕೆಳಗೆ ಮಾಡಬಲ್ಲರು. ಹೀಗಾಗಿ, ರೈತ ವಿರೋಧಿ ಕೆಲಸ ಮಾಡಿ ತಪ್ಪು ಮಾಡುವ ಬದಲು, ರೈತರು ಮತ್ತು ದುಡಿಯವ ವರ್ಗದ ಪರ ಕೆಲಸ ಮಾಡಿ. ಇಲ್ಲದಿದ್ದರೆ ನಿಮಗೆ ಹಾನಿ ತಪ್ಪಿದ್ದಲ್ಲ’ ಎಂದು ಎಚ್ಚರಿಕೆ ನುಡಿಗಳನ್ನಾಡಿದರು.

ಪ್ರಧಾನಿ ಅವರ 'ರಾಜಕೀಯ ಲೆಕ್ಕಾಚಾರ'ದ ನಡೆ ರೈತರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ನರೇಂದ್ರ ಮೋದಿ ಅವರು ಸುಗ್ರೀವಾಜ್ಞೆ ಎಂಬ ‘ಕೊಡಲಿ’ ಬಳಸಿ ರೈತರನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.