ADVERTISEMENT

ರೈಲು ದುರಂತಗಳ ಹಿಂದೆ ಭಯೋತ್ಪಾದಕರ ಕೈವಾಡವಿರುವ ಶಂಕೆ: ಎನ್‌ಐಎ ತನಿಖೆ

ಏಜೆನ್ಸೀಸ್
Published 27 ಜನವರಿ 2017, 9:50 IST
Last Updated 27 ಜನವರಿ 2017, 9:50 IST
ರೈಲು ದುರಂತಗಳ ಹಿಂದೆ ಭಯೋತ್ಪಾದಕರ ಕೈವಾಡವಿರುವ ಶಂಕೆ: ಎನ್‌ಐಎ ತನಿಖೆ
ರೈಲು ದುರಂತಗಳ ಹಿಂದೆ ಭಯೋತ್ಪಾದಕರ ಕೈವಾಡವಿರುವ ಶಂಕೆ: ಎನ್‌ಐಎ ತನಿಖೆ   

ನವದೆಹಲಿ: ಇತ್ತೀಚೆಗೆ ಸಂಭವಿಸುತ್ತಿರುವ ರೈಲು ದುರಂತಗಳ ಹಿಂದೆ ಭಯೋತ್ಪಾದಕರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದೆ.

ಜಗದಾಲ್ಪುರ– ಭುವನೇಶ್ವರ ಹಿರಾಖಂಡ ಎಕ್ಸ್‌ಪ್ರೆಸ್‌ ರೈಲು ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದ ಎನ್‌ಐಎ ತಂಡಕ್ಕೆ ಘಟನೆಯ ಹಿಂದೆ ಭಯೋತ್ಪಾದಕರು ಇಲ್ಲವೇ ನಕ್ಸಲರ ಕೈವಾಡವಿರುವ ಬಗ್ಗೆ ಅನುಮಾನ ಮೂಡಿದೆ ಎಂದು ಮೂಲಗಳು ತಿಳಿಸಿವೆ.

ಮಡಗಾಂವ್‌–ದಾದರ್‌ ರೈಲು ಮಾರ್ಗದ ಹಳಿಗಳ ಮೇಲೆ ಇದೇ ಮಂಗಳವಾರ ದೊಡ್ಡ ಕಬ್ಬಿಣದ ಕಂಬ ಬಿದ್ದಿದ್ದನ್ನು ಜನಶತಾಬ್ದಿ ರೈಲಿನ ಲೋಕೊ ಪೈಲಟ್‌ ಗಮನಿಸಿ ರೈಲು ನಿಲ್ಲಿಸಿದ್ದರಿಂದ ಭಾರೀ ದುರಂತ ತಪ್ಪಿದೆ. ಈ ರೈಲಿನಲ್ಲಿ 650 ಮಂದಿ ಪ್ರಯಾಣಿಸುತ್ತಿದ್ದರು.

ADVERTISEMENT

ಬಿಹಾರದ ಸೋನೆಪುರದಲ್ಲಿ ಸಂಭವಿಸಬಹುದಾಗಿದ್ದ ರೈಲು ದುರಂತವೊಂದು ರೈಲ್ವೆ ಹಳಿ ತಪಾಸಣೆ ನಡೆಸುವ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ತಪ್ಪಿತ್ತು. 

ಸೋನೆಪುರ ರೈಲ್ವೆ ವಿಭಾಗದ ಸತ್‌ಜಗತ್‌ ಮತ್ತು ದಾಲ್‌ಸಿಂಗ್‌ಸರಯ್‌ ನಡುವಿನ ಹಳಿಯ ಮೇಲೆ ದುಷ್ಕರ್ಮಿಗಳು ಇರಿಸಿದ್ದ ಕಲ್ಲಿನ ಚಪ್ಪಡಿಗಳನ್ನು ತೆರವುಗೊಳಿಸಿದ ರೈಲ್ವೆ ಸಿಬ್ಬಂದಿ ಸಂಭಾವ್ಯ ದುರಂತವನ್ನು ತಪ್ಪಿಸಿದ್ದರು.

ಹಳಿಗಳ ಮೇಲೆ ಕಬ್ಬಿಣದ ಕಂಬ ಹಾಗೂ ಕಲ್ಲು ಚಪ್ಪಡಿಗಳನ್ನು ಎಳೆಯುತ್ತಿರುವುದು ಭಯೋತ್ಪಾದಕ ಕೃತ್ಯವಿರಬಹುದು ಎಂದು ಎನ್‌ಐಎ ಶಂಕೆ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.