ADVERTISEMENT

ರೈಲ್ವೆ ಯೋಜನೆ: ರಾಜ್ಯದ ಹೊರೆ ಇಳಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2014, 20:06 IST
Last Updated 4 ಜೂನ್ 2014, 20:06 IST

ನವದೆಹಲಿ: ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೊಳ್ಳಲಾಗಿರುವ ರೈಲ್ವೆ ಯೋಜನೆಗಳಿಗೆ ನಿಗದಿ ಮಾಡಿರುವ ರಾಜ್ಯದ ಪಾಲಿನ ಹಣವನ್ನು ಕಡಿಮೆ ಮಾಡಬೇಕು. ಇದರಿಂದ ಬೊಕ್ಕಸಕ್ಕೆ ಭಾರಿ ಹೊರೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದ ಮುಖ್ಯಮಂತ್ರಿ, ರಾಜ್ಯದ ಯೋಜನೆಗಳಿಗೆ ತಮ್ಮ ಸರ್ಕಾರ ಶೇ.50ರಷ್ಟು ವೆಚ್ಚ ಭರಿಸುತ್ತಿದೆ. ಅಲ್ಲದೆ, ಉಚಿತವಾಗಿ ಜಮೀನು ನೀಡುತ್ತಿದೆ. ಇದರಿಂದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ ಎಂದು ವಿವರಿಸಿದರು.

ರೈಲ್ವೆ ಯೋಜನಾ ವೆಚ್ಚವನ್ನು ಸಮಾನವಾಗಿ ಹಂಚಿಕೆ ಮಾಡಿಕೊಳ್ಳಲು ಮುಂದೆ ಬಂದಿರುವ ಮೊದಲ ರಾಜ್ಯ ಕರ್ನಾಟಕ. ಅನೇಕ ರಾಜ್ಯಗಳು ಇದೇ ಹಾದಿ ತುಳಿದಿವೆ. ಈ ಹಂತದಲ್ಲಿ ವೆಚ್ಚ ಕಡಿಮೆ ಮಾಡಲು ಸಾಧ್ಯವಿಲ್ಲ. ಅಲ್ಲದೆ, ರೈಲ್ವೆ ಸಚಿವಾಲಯದ ಹಣಕಾಸು ಸ್ಥಿತಿ ಉತ್ತಮವಾಗಿಲ್ಲ ಎಂದು ಸದಾನಂದಗೌಡ ವಿವರಿಸಿದರು.

ಬೇರೆ ರಾಜ್ಯಗಳು ತ್ವರಿತವಾಗಿ ರೈಲ್ವೆ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಿವೆ. ಕರ್ನಾಟಕವೂ ತನ್ನ ಯೋಜನೆಗಳಿಗೆ ತಡಮಾಡದೆ ಹಣಕಾಸು ಒದಗಿಸಬೇಕು. ಆಗ ಮಾತ್ರ ಕೇಂದ್ರ ತನ್ನ ಪಾಲಿನ ಹಣವನ್ನು ಕೊಡಲು ಸಾಧ್ಯ ಎಂದು ರೈಲ್ವೆ ಸಚಿವರು ಮುಖ್ಯಮಂತ್ರಿಗೆ ತಿಳಿಸಿದರು.

ಬೆಂಗಳೂರು– ಮೈಸೂರು ಜೋಡಿ ರೈಲು ಮಾರ್ಗವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ವಿಧಾನ ಮಂಡಲ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ: ರಾಜ್ಯ ವಿಧಾನಮಂಡಲದ ಅಧಿವೇಶನದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯಸಭೆ ಹಾಗೂ ವಿಧಾನಸಭೆ ಚುನಾವಣೆ ಈ ತಿಂಗಳ 19ರಂದು ಮುಗಿಯಲಿದೆ.  23ರಿಂದ ಐದು ವಾರ ವಿಧಾನಮಂಡಲದ ಅಧಿವೇಶನ ನಡೆಯಲಿದೆ. ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಪತ್ರಕರ್ತರಿಗೆ ತಿಳಿಸಿದರು.
ಸಚಿವ ಸಂಪುಟದಲ್ಲಿ ನಾಲ್ಕು ಸಚಿವ ಸ್ಥಾನಗಳು ಖಾಲಿ ಇದ್ದು, ತರಾತುರಿಯಲ್ಲಿ ತುಂಬಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯಸಭೆ ಹಾಗೂ ವಿಧಾನಪರಿಷತ್‌ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ. ಗುರುವಾರ ಅಂತಿಮವಾಗುವ ಬಗ್ಗೆಯೂ ಅನುಮಾನವಿದೆ. ಈ ವಿಷಯದಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ ಎಂದು ವಿವರಿಸಿದರು. ಮುಖ್ಯಮಂತ್ರಿ ಬುಧವಾರ ರಾತ್ರಿಯೂ ರಾಜ್ಯದ ಉಸ್ತುವಾರಿ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಜತೆ ಸಮಾಲೋಚನೆ ನಡೆಸಿದರು. ಗುರುವಾರ ವರಿಷ್ಠರ ಜತೆ ಚರ್ಚಿಸಿದ ಬಳಿಕ ರಾತ್ರಿ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.