ADVERTISEMENT

ವಾಚ್‌ ಹಗರಣ: ಸೋನಿಯಾ ಕಳವಳ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2016, 19:35 IST
Last Updated 9 ಮಾರ್ಚ್ 2016, 19:35 IST
ವಾಚ್‌ ಹಗರಣ: ಸೋನಿಯಾ ಕಳವಳ
ವಾಚ್‌ ಹಗರಣ: ಸೋನಿಯಾ ಕಳವಳ   

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುಬಾರಿ ‘ಕೈಗಡಿಯಾರ ವಿವಾದ’ದಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯನವರು ಕೈಗಡಿಯಾರ ವಿವಾದವನ್ನು ಸರಿಯಾಗಿ ನಿರ್ವಹಿಸಲಿಲ್ಲ. ಈ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ಕೊಡಲು  ವಿಫಲರಾದರು ಎಂಬ ಅಭಿಪ್ರಾಯ ಸೋನಿಯಾ ಅವರಿಗಿದೆ ಎಂದು ಎಐಸಿಸಿ ಉನ್ನತ ಮೂಲಗಳು ತಿಳಿಸಿವೆ.

ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಬುಧವಾರ ಕಾಂಗ್ರೆಸ್‌ ಅಧ್ಯಕ್ಷರನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ವಾಚ್‌ ವಿವಾದ ಕುರಿತು ಸೋನಿಯಾ ಪ್ರಸ್ತಾಪಿಸಿದರು. ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪರಮೇಶ್ವರ್‌ ಪೇಚಾಡಿದರು ಎಂದೂ ಮೂಲಗಳು ಹೇಳಿವೆ.

‘ಬಿಜೆಪಿ ವಿರುದ್ಧ ಕಾಂಗ್ರೆಸ್‌ ಪ್ರಬಲವಾದ ಹೋರಾಟ ನಡೆಸುತ್ತಿದೆ. ಪ್ರಧಾನಿ ಮೋದಿ ಅವರ ಸೂಟ್‌– ಬೂಟ್‌ ಸರ್ಕಾರದ ಬಗ್ಗೆ ಟೀಕೆಗಳನ್ನು ಮಾಡುತ್ತಿದೆ. ಈ ಸಂದರ್ಭದಲ್ಲಿ ನಮ್ಮದೇ ಮುಖ್ಯಮಂತ್ರಿ ದುಬಾರಿ ಗಡಿಯಾರ ವಿವಾದದಲ್ಲಿ ಸಿಕ್ಕಿಕೊಂಡರೆ ಸಮರ್ಥಿಸಿಕೊಳ್ಳುವುದಾದರೂ ಹೇಗೆ? ನಮ್ಮ ಪರಿಸ್ಥಿತಿ ಏನಾಗಬೇಕು?’ ಎಂದು ಸೋನಿಯಾ ಅವರು ಕೇಳಿದ್ದಾಗಿ ಮೂಲಗಳು ತಿಳಿಸಿವೆ.

ಧಾರವಾಡ ಲೋಕಸಭೆ ಸದಸ್ಯ ಪ್ರಹ್ಲಾದ್‌ ಜೋಶಿ ಕಳೆದ ವಾರ ಲೋಕಸಭೆಯಲ್ಲಿ ಮುಖ್ಯಮಂತ್ರಿ ಕೈಗಡಿಯಾರ ವಿವಾದವನ್ನು ಪ್ರಸ್ತಾಪ ಮಾಡಿ ವಾಗ್ದಾಳಿ ನಡೆಸಿದ್ದರು. ಆ ವೇಳೆಯಲ್ಲಿ ಸೋನಿಯಾ ಹಾಗೂ ರಾಹುಲ್‌ ಗಾಂಧಿ ಸದನದೊಳಗೆ ಇದ್ದರು. ಜೋಶಿ, ಈ ವಿಷಯ ಉಲ್ಲೇಖಿಸಿದ್ದನ್ನು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧಿಸಿದ್ದರು.

ಕಾಂಗ್ರೆಸ್‌ ಅಧ್ಯಕ್ಷರು ಪರಮೇಶ್ವರ್‌ ಅವರ ಜತೆ ಸುಮಾರು 20 ನಿಮಿಷ ಮಾತುಕತೆ ನಡೆಸಿದರು. ಚರ್ಚೆ ವೇಳೆ ಕೈಗಡಿಯಾರಕ್ಕೆ ಸಂಬಂಧಪಟ್ಟ ವರದಿಯೊಂದನ್ನು ಪರಮೇಶ್ವರ್‌ ಸಲ್ಲಿಸಿದರು. ಮುಖ್ಯಮಂತ್ರಿಗಳ ಕೈಗಡಿಯಾರ ಎಲ್ಲಿಂದ ಬಂತು? ಕೊಟ್ಟವರು ಯಾರು? ಎಂಬ ವಿವರಗಳನ್ನು ಸೋನಿಯಾ ಬಯಸಿದರು ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಪರಮೇಶ್ವರ್‌ ಅವರು ಕೊಟ್ಟ ವರದಿಯಲ್ಲಿ ಏನಿದೆ ಎಂಬ ವಿವರ ಬಹಿರಂಗವಾಗಬೇಕಿದೆ. ವಿಧಾನಸಭೆ ಉಪ ಚುನಾವಣೆ, ಜಿಲ್ಲಾ– ತಾಲೂಕು ಪಂಚಾಯತಿ ಚುನಾವಣೆ ಸಾಧನೆ ಬಗ್ಗೆ ಸೋನಿಯಾ ಮಾಹಿತಿ ಪಡೆದರು. ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದ್ದರೆ ಇಷ್ಟೊಂದು ಕಳಪೆ ಫಲಿತಾಂಶ ಬರುತ್ತಿರಲಿಲ್ಲ ಎಂದಿದ್ದಾರೆ.

ಹೆಬ್ಬಾಳದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರೆಹಮಾನ್‌ ಷರೀಫ್‌ ಸೋತ ಬಗ್ಗೆ ಎಐಸಿಸಿ ಕಾರ್ಯದರ್ಶಿ ಚೆಲ್ಲಾಕುಮಾರ್‌ ಪಕ್ಷದ ಅಧ್ಯಕ್ಷರಿಗೆ ವರದಿಯೊಂದನ್ನು ಕೊಟ್ಟಿದ್ದಾರೆ. ಈ ವರದಿ ಕೊಡುವ ಮೊದಲು ಕುಮಾರ್ ಬೆಂಗಳೂರಿನಲ್ಲಿ ಮಾಜಿ ಸಚಿವ ಜಾಫರ್‌ ಷರೀಫ್‌ ಅವರನ್ನು ಭೇಟಿ ಮಾಡಿದ್ದರೆನ್ನಲಾಗಿದೆ.
ಸೋನಿಯಾ ಅವರನ್ನು ಪರಮೇಶ್ವರ್‌ ಭೇಟಿ ಮಾಡಿದ ವೇಳೆಯಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ವಿಷಯ ಪ್ರಸ್ತಾಪವಾಯಿತು. ಪರಮೇಶ್ವರ್‌ ಜತೆ ಸಿದ್ದರಾಮಯ್ಯನವರು ದೆಹಲಿಗೆ ಬರುವ ಕಾರ್ಯಕ್ರಮವಿತ್ತು. ಆದರೆ, ಕರ್ತವ್ಯದ ಒತ್ತಡದಿಂದ ಬರಲಿಲ್ಲ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.