ADVERTISEMENT

ವಾಧ್ರಾ ಬೆನ್ನಿಗೆ ಕಾಂಗ್ರೆಸ್‌

ಪ್ರಿಯಾಂಕಾಗೆ ನೋವು ತಂದ ಗಂಡ, ಕುಟುಂಬದ ವಿರುದ್ಧದ ಆರೋಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 20:00 IST
Last Updated 22 ಏಪ್ರಿಲ್ 2014, 20:00 IST

ನವದೆಹಲಿ (ಪಿಟಿಐ): ತಮ್ಮ ಪತಿ ರಾಬರ್ಟ್‌ ವಾಧ್ರಾ ಅವರ ವಿರುದ್ಧ ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಯ ವಿರುದ್ಧ ಇದೇ ಮೊದಲ ಬಾರಿಗೆ  ಪ್ರಿಯಾಂಕಾ ಗಾಂಧಿ ಧ್ವನಿ ಎತ್ತಿದ್ದೇ ತಡ, ಕಾಂಗ್ರೆಸ್‌ ಪಕ್ಷ ತಮ್ಮ ಅಧ್ಯಕ್ಷೆಯ ಅಳಿಯನಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ರಾಬರ್ಟ್‌ ವಾಧ್ರಾ ವಿರುದ್ಧ ಟೀಕೆ ಕೇಳಿಬಂದಾಗ­ಲೆಲ್ಲ ಮೌನಕ್ಕೆ ಶರಣಾಗುತ್ತಿದ್ದ ಕಾಂಗ್ರೆಸ್‌, ಈಗ ಎಲ್ಲ ಹಿಂಜರಿಕೆಗಳನ್ನು ಕಳಚಿಕೊಂಡು ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಕಟುವಾದ ಶಬ್ದಗಳಲ್ಲಿ ಟೀಕಿಸಿದೆ. 

ಕಾಂಗ್ರೆಸ್ ಪಕ್ಷಕ್ಕೂ ವಾಧ್ರಾ ಅವರಿಗೂ ಸಂಬಂಧ­ವಿಲ್ಲ. ಅವರೊಬ್ಬ ‘ಖಾಸಗಿ ವ್ಯಕ್ತಿ’ ಎಂದು ಈವರೆಗೆ ಹೇಳುತ್ತಿದ್ದ ಕಾಂಗ್ರೆಸ್‌, ‘ಬಿಜೆಪಿಯು, ಗಾಂಧಿ ಕುಟುಂಬದ ವಿರುದ್ಧ  ಸುಳ್ಳು ಪ್ರಕರಣಗಳನ್ನು ದಾಖ­ಲಿ­ಸುವ ಮೂಲಕ ದ್ವೇಷದ ರಾಜಕೀಯ ಮಾಡುತ್ತಿದೆ’ ಎಂದು ಆರೋಪಿಸಿದೆ.

ರಾಯ್‌ಬರೇಲಿಯಲ್ಲಿ ಮಂಗಳವಾರ ಸೋನಿಯಾ ಗಾಂಧಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಿಯಾಂಕಾ ಮೌನ ಮುರಿದು ತಮ್ಮ ಪತಿಯ ವಿರುದ್ಧ ಬಿಜೆಪಿ  ಮಾಡುತ್ತಿರುವ ಆರೋಪಗಳ ಕುರಿತು ಮಾತನಾಡಿದ ಕೂಡಲೇ, ಇತ್ತ ದೆಹಲಿಯಲ್ಲಿ  ಕಾಂಗ್ರೆಸ್‌ ಸುದ್ದಿಗೋಷ್ಠಿ­ಯಲ್ಲಿ ವಾಧ್ರಾ ಅವರನ್ನು ಬಲವಾಗಿ ಸಮರ್ಥಿಸಿಕೊಳ್ಳಲಾಯಿತು.

‘ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಗಾಂಧಿ ಕುಟುಂಬದ ಸದಸ್ಯರ ವಿರುದ್ಧ ಕೀಳುಮಟ್ಟದ ಮತ್ತು ನಿರಾಧಾರ ಆರೋಪಗಳನ್ನು ಮಾಡುತ್ತಿದ್ದಾರೆ.  ವಾಧ್ರಾ ಅವರು ರಾಜಕೀಯದ ಮುಖ್ಯಭೂಮಿಕೆಯಲ್ಲಿ ಇಲ್ಲದಿದ್ದರೂ ಅವರ ವಿರುದ್ಧ ಮೋದಿ ಅವರು ಮತ್ಸರ, ಪ್ರತೀಕಾರದ ರಾಜಕೀಯ ಮಾಡುತ್ತಿದ್ದಾರೆ’ ಎಂದು ಪಕ್ಷದ ವಕ್ತಾರ ರಣದೀಪ್‌ ಸುರ್ಜೆ­ವಾಲಾ ಅವರು ಸುದ್ದಿಗಾರರಿಗೆ ತಿಳಿಸಿದರು.

‘ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧವೂ ಸಂಘ ಪರಿವಾರ ಇಂತಹದ್ದೇ ನಿರಾಧಾರ ಆರೋಪಗಳನ್ನು ಮಾಡಿದೆ ಮತ್ತು ಮಾಡುತ್ತಿದೆ. ಆದರೆ, ಜನರು ಇಂತಹ  ರಾಜಕೀಯವನ್ನು ಹಿಂದೆಯೂ ತಿರಸ್ಕರಿಸಿ­ದ್ದಾರೆ. ಈಗಲೂ ತಿರಸ್ಕರಿಸುತ್ತಾರೆ ಎಂಬ ವಿಶ್ವಾಸ ನಮಗಿದೆ’ ಎಂದರು.

‘ಬಿಜೆಪಿ ಪ್ರಾಯೋಜಿತ ಶಕ್ತಿಗಳು ಗಾಂಧಿ ಕುಟುಂಬ­ದವರ ವಿರುದ್ಧ ಅಲಹಾಬಾದ್‌ ಹೈಕೋರ್ಟ್‌­ನಲ್ಲಿ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) 2013ರ ಮಾರ್ಚ್‌ನಲ್ಲೇ ವಜಾ­ಗೊಂಡಿದೆ. ಆದರೂ ತೃಪ್ತರಾಗದ ಸಂಘ ಪರಿವಾರದ ಮೋದಿ ಮಿತ್ರರು ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಪಿಐಎಲ್‌ ಸಲ್ಲಿಸಿ­ದರು. ಅದೂ ವಜಾ­ಗೊಂಡಿದೆ. ಇದು ವೈಯಕ್ತಿಕ ಹಿತಾ­ಸಕ್ತಿ ಅಲ್ಲದೆ ಮತ್ತೇನು’ ಎಂದು ಅವರು ಪ್ರಶ್ನಿಸಿದರು.

ತಿರುಗೇಟು ನೀಡುತ್ತೇವೆ (ರಾಯ್‌ಬರೇಲಿ ವರದಿ):  ತಮ್ಮ ಪತಿ ರಾಬರ್ಟ್‌ ವಾಧ್ರಾ ಅವರ ವಿರುದ್ಧದ ಟೀಕೆಗಳು ತಮಗೆ  ತೀವ್ರ ನೋವು ತಂದಿವೆ.

ರಾಜಕೀಯ ಕಾರಣಗಳಿಗಾಗಿ ತಮ್ಮ ಪತಿ ವಿರುದ್ಧ ವಾಗ್ದಾಳಿ ನಡೆಸಲಾಗುತ್ತಿದೆ. ಇದನ್ನು ಸಮರ್ಥವಾಗಿ ಎದುರಿಸಿ ತಿರು­ಗೇಟು ನೀಡುತ್ತೇವೆ ಎಂದು ಪ್ರಿಯಾಂಕಾ ಹೇಳಿದರು.

ತಮ್ಮ ತಾಯಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪರ ಇಲ್ಲಿ ಮಂಗಳವಾರ ಪ್ರಚಾರ ಕಾರ್ಯದಲ್ಲಿ ಪ್ರಿಯಾಂಕಾ ಮಾತನಾಡಿದರು. 

‘ಅಭಿವೃದ್ಧಿ ವಿಷಯದಿಂದ ಜನತೆ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ನನ್ನ ಪತಿ ವಿರುದ್ಧ ಅರ್ಥಹೀನ ಟೀಕೆಗಳನ್ನು ಮಾಡುತ್ತಿದೆ. ಆದರೆ, ಸತ್ಯ ಏನೆಂಬುದು ಹೊರಗೆ ಬರಲಿದೆ’ ಎಂದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ, ‘ಎರಡು ವರ್ಷಗಳಿಂದ ಪತಿ ವಿರುದ್ಧ ಇಂತಹ ಟೀಕೆಗಳನ್ನು ಮಾಡಲಾಗುತ್ತಿದೆ. ಇಂತಹ­ದ್ದನ್ನು ಹೇಗೆ ಎದುರಿಸಬೇಕು ಎಂಬುದನ್ನು ಅಜ್ಜಿಯಿಂದ (ಇಂದಿರಾ ಗಾಂಧಿ)  ಕಲಿತಿದ್ದೇನೆ ಎಂದರು.

ಹರಿಯಾಣ ಮತ್ತು ರಾಜಸ್ತಾನಗಳಲ್ಲಿ  ವಿವಾದಾತ್ಮಕ ಭೂ ವ್ಯವಹಾರಗಳಲ್ಲಿ ರಾಬರ್ಟ್‌ ವಾಧ್ರಾ  ಅವರ ಪಾತ್ರ ಇದೆ ಎಂದು ನರೇಂದ್ರ ಮೋದಿ ಮತ್ತಿತರ ಬಿಜೆಪಿ ನಾಯಕರು ಆಪಾದಿಸಿರುವುದು ಪ್ರಿಯಾಂಕಾ ಅವರ ಹೇಳಿಕೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.