ADVERTISEMENT

ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಗೋಪಾಲಗೌಡ

ಅಕ್ರಮ ಗಣಿಗಾರಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2014, 19:30 IST
Last Updated 23 ಸೆಪ್ಟೆಂಬರ್ 2014, 19:30 IST

ನವದೆಹಲಿ: ಅಕ್ರಮ ಗಣಿಗಾರಿಕೆ ಆರೋಪ­ಕ್ಕೊಳಗಾಗಿ­ರುವ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಸ್‌.-­ಎಂ.­ಕೃಷ್ಣ, ಎಚ್‌.ಡಿ. ಕುಮಾರಸ್ವಾಮಿ ಮತ್ತು ಎನ್‌. ಧರ್ಮಸಿಂಗ್‌ ಅವರ ವಿರುದ್ಧ ಲೋಕಾ­ಯುಕ್ತ ಪೊಲೀ­ಸರು ನಡೆಸುತ್ತಿರುವ ತನಿಖೆಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯಿಂದ ಹೊರ­-ಗುಳಿಯಲು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿ. ಗೋಪಾಲಗೌಡ ಮಂಗಳವಾರ ತೀರ್ಮಾನಿಸಿದರು.

ಲೋಕಾಯುಕ್ತ ಕೋರ್ಟ್‌ ತಮ್ಮ ವಿರುದ್ಧ ತನಿಖೆ ನಡೆಸಲು ನೀಡಿರುವ ಆದೇಶ ರದ್ದುಪಡಿಸುವಂತೆ ಮನವಿ ಮಾಡಿ ರಾಜ್ಯದ ಮೂವರು ಮಾಜಿ ಮುಖ್ಯ-­ಮಂತ್ರಿ­ಗಳು ಸಲ್ಲಿಸಿರುವ ಅರ್ಜಿ ಮಂಗಳವಾರ ನ್ಯಾ. ಗೋಪಾಲಗೌಡ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆ ಸಂದರ್ಭದಲ್ಲಿ ಪ್ರಕರಣದ ವಿಚಾರಣೆ­ಯಿಂದ ದೂರ ಉಳಿಯು­ವುದಾಗಿ ಅವರು ಪ್ರಕಟಿಸಿದರು.

ನ್ಯಾ. ಗೋಪಾಲಗೌಡ ಹಾಗೂ ನ್ಯಾ. ಆದರ್ಶ ಕುಮಾರ್‌ ಗೋಯಲ್‌ ಅವರ ನ್ಯಾಯಪೀಠದಿಂದ ಬೇರೆ ಪೀಠಕ್ಕೆ ವರ್ಗಾವಣೆ ಆಗಲಿದೆ. ಮಾಜಿ ಮುಖ್ಯ­ಮಂತ್ರಿ ಮತ್ತು ಕೆಲವು ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಬೆಂಗಳೂರಿನ ವಿಶೇಷ ಲೋಕಾಯುಕ್ತ ಕೋರ್ಟ್‌ನಲ್ಲಿ ಸಲ್ಲಿಸಿರುವ ಖಾಸಗಿ   ದೂರು ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ಕೋರ್ಟ್‌ 2011ರ ಡಿಸೆಂಬರ್‌ನಲ್ಲಿ ಆದೇಶಿಸಿತ್ತು.

ಯುಪಿಎ ಸರ್ಕಾರ– 2ರಲ್ಲಿ ವಿದೇಶಾಂಗ ಸಚಿವರೂ ಆಗಿದ್ದ ಕೃಷ್ಣ, ಲೋಕಾಯುಕ್ತ ನ್ಯಾಯಾಲಯದ ಆದೇಶ ಅನುಸರಿಸಿ ಲೋಕಾಯುಕ್ತ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ವಜಾ ಮಾಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ತನಿಖೆ ಮಧ್ಯಪ್ರವೇಶಿಸಲು ನಿರಾಕರಿಸಿದ್ದರಿಂದ  ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. 2012ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಲೋಕಾಯುಕ್ತ ಪೊಲೀಸರ ತನಿಖೆಗೆ ತಡೆಯಾಜ್ಞೆ ನೀಡಿದೆ.

ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ಇನ್ನಿಬ್ಬರು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಧರ್ಮಸಿಂಗ್‌ ಅವರಿಗೂ ಅನ್ವಯಿಸಿದೆ. ಮಂಗಳವಾರ ಪ್ರಕರಣದ ವಿಚಾರಣೆ ಸಮಯದಲ್ಲಿ ಅಬ್ರಹಾಂ ಪರ ವಕೀಲರು ಈ ವಿಷಯವನ್ನು ಪ್ರಸ್ತಾಪಿಸಿದರು. ಕೃಷ್ಣ ಅವರಿಗೆ ನೀಡಿರುವ ತಡೆಯಾಜ್ಞೆ ಉಳಿದ ಅರ್ಜಿದಾರ­ರಿಗೂ ಅನ್ವಯ ಆಗಲಿದೆಯೇ ಎಂದು ಸ್ಪಷ್ಟಪಡಿಸುವಂತೆ ಕೇಳಿದರು.

ಅನಂತರ ಗೋಪಾಲಗೌಡ ಅವರ ನ್ಯಾಯಪೀಠ ಪ್ರಕರಣದಿಂದ ವಿಚಾರಣೆ­ಯಿಂದ ಹೊರಗೆ ಉಳಿಯು­ವುದಾಗಿ ಪ್ರಕಟಿಸಿತು. ಕೃಷ್ಣ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ (1999– 2004) ಮೀಸಲು ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಕೊಟ್ಟು, ಪರಿಸರಕ್ಕೆ ಹಾನಿ ಮಾಡಿದ್ದಾರೆ.

ಈ ಕ್ರಮದ ಹಿಂದೆ ವೈಯಕ್ತಿಕವಾಗಿ ಲಾಭ ಮಾಡುವ ಉದ್ದೇಶವಿದೆ. ಇಲಾಖೆ ಕಾರ್ಯ–ದರ್ಶಿಗಳ ಸಲಹೆ ಧಿಕ್ಕರಿಸಿ ಗಣಿಗಾರಿಕೆ ನಡೆಸಲು ಅವರು ಅನುಮತಿ ನೀಡಿದ್ದಾರೆ ಎಂದು ಅಬ್ರಹಾಂ ಲೋಕಾಯುಕ್ತ ಕೋರ್ಟಿನಲ್ಲಿ ದೂರಿದ್ದಾರೆ. ಧರ್ಮ-ಸಿಂಗ್‌ ಪಟ್ಟಾ ಜಮೀನಿನಲ್ಲಿ ಕಬ್ಬಿಣ ಹಾಗೂ ಮ್ಯಾಂಗನೀಸ್‌ ಅದಿರು ತೆಗೆ-ಯಲು ಅವಕಾಶ ಕೊಡುವ ಮೂಲಕ ಬೊಕ್ಕಸಕ್ಕೆ 23 ಕೋಟಿ ನಷ್ಟ ಉಂಟು-ಮಾಡಿದ್ದಾರೆ ಎಂದು ದೂರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT