ADVERTISEMENT

ವಿದ್ಯಾರ್ಥಿನಿಯರ ಉತ್ತರದಿಂದ ರಾಹುಲ್‌ ಇರುಸುಮುರುಸು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 20:27 IST
Last Updated 25 ನವೆಂಬರ್ 2015, 20:27 IST

ಬೆಂಗಳೂರು: ಇಲ್ಲಿನ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿನಿಯರ ಜತೆಗಿನ ಸಂವಾದದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಇರುಸುಮುರುಸು ಅನುಭವಿಸಿದ ಪ್ರಸಂಗ ನಡೆಯಿತು.

ಪ್ರಧಾನಿ ಮೋದಿಯವರ ಕನಸಿನ ‘ಸ್ವಚ್ಛ ಭಾರತ ಮತ್ತು ಮೇಕ್‌ ಇನ್‌ ಇಂಡಿಯಾ’ ಕುರಿತು ರಾಹುಲ್‌ ಕೇಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿನಿಯರು ನೀಡಿದ ಉತ್ತರ ಹೀಗಿದೆ.

ಅಸಹಿಷ್ಣುತೆ: ಅಸಹಿಷ್ಣುತೆ ಬಗ್ಗೆ ವಿದ್ಯಾರ್ಥಿನಿಯರು ಪ್ರಶ್ನೆ ಕೇಳಿದರು. ಅದಕ್ಕೆ ರಾಹುಲ್‌, ‘ಹೆಚ್ಚುತ್ತಿರುವ ಅಸಹಿಷ್ಣುತೆ ನನ್ನ ಮನಸ್ಸನ್ನು ಕದಡಿದೆ. ಬಾಳು ಮತ್ತು ಬಾಳಲು ಬಿಡು ಎನ್ನುವುದೇ ನಮ್ಮ ದೇಶದ ಬಹುದೊಡ್ಡ ಶಕ್ತಿ. ಇಂತಹ ಮಹಾನ್‌ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ’ ಎಂದರು.

ಪ್ರಧಾನಿ ವಿರುದ್ಧ ವಾಗ್ದಾಳಿ:  ‘ಇಡೀ ದೇಶವನ್ನು ಪ್ರಧಾನ ಮಂತ್ರಿ ಕಚೇರಿಯೊಂದರಿಂದಲೇ ನಡೆಸಲು ಸಾಧ್ಯವೇ? ಒಬ್ಬರಿಂದ ದೇಶದ ಸಮಸ್ಯೆಗಳಿಗೆ ಚರ್ಚೆ ಮೂಲಕವೇ ಪರಿಹಾರ ಸಿಗಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಅಸಹಿಷ್ಣುತೆ ಸೇರಿದಂತೆ ಹಲವು ವಿಷಯಗಳನ್ನು ಸಂಸತ್‌ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದೂ ಅವರು  ಹೇಳಿದರು.

‘ಮೋದಿ ಅವರು ಪ್ರತಿಪಕ್ಷಗಳ ಜತೆ ಚರ್ಚೆ ನಡೆಸುವ ಸಂಪ್ರದಾಯವನ್ನೇ ಕೈಬಿಟ್ಟಿದ್ದಾರೆ. ಅವರು ಪ್ರಧಾನಿಯಾದ ನಂತರ ಒಮ್ಮೆಯೂ ಕಾಂಗ್ರೆಸ್‌ ನಾಯಕರಿಗೆ ಕನಿಷ್ಠ ದೂರವಾಣಿ ಕರೆ ಮಾಡಿಯೂ ಮಾತನಾಡಿಲ್ಲ. ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಆ ರೀತಿ ಇರಲಿಲ್ಲ’ ಎಂದರು.

ಉದ್ಯೋಗ ಸೃಷ್ಟಿ ಇಲ್ಲ: ‘ಎರಡು ವರ್ಷದಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಹೇಳಿದ್ದರು. ಆದರೆ, ನಿಜಕ್ಕೂ ಅದು ಈಡೇರಿದೆಯೇ? ಎಲ್ಲಿ ಉದ್ಯೋಗ ಸಿಗುತ್ತಿದೆ? ಅಂತಹ ಕುರುಹುಗಳೇ ದೇಶದಲ್ಲಿ ಕಾಣುತ್ತಿಲ್ಲ’ ಎಂದರು.

‘ಇತ್ತೀಚೆಗೆ ವಿದೇಶಿ ಹೂಡಿಕೆದಾರರೊಬ್ಬರ ಜತೆ ಮಾತನಾಡಿ, ಮೋದಿ ಸರ್ಕಾರದ ಬಗ್ಗೆ ಅಭಿಪ್ರಾಯ ಕೇಳಿದೆ. ಅದಕ್ಕೆ ಅವರಿಂದ, ಏನೂ  ಆಗುತ್ತಿಲ್ಲ ಎನ್ನುವ ಉತ್ತರ ಬಂತು. ಇದು ಮೋದಿ ಕಾರ್ಯವೈಖರಿ’ ಎಂದು ಟೀಕಿಸಿದರು.

ಟ್ವಿಟರ್‌ನಲ್ಲಿ ಪ್ರತ್ಯುತ್ತರ: ಸಂವಾದದಲ್ಲಿ ರಾಹುಲ್‌ ಪೇಚಿಗೆ ಸಿಲುಕಿದ್ದು ಟ್ವಿಟರ್‌ನಲ್ಲಿ ದೊಡ್ಡ ಚರ್ಚೆಗೆ ಮೂಲವಾಯಿತು.  ಸಂಜೆ 6.30ರ ವೇಳೆಗೆ ಇದು ಟ್ವಿಟರ್‌ನಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವಾಗಿತ್ತು.

#RahulStumped ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ಟ್ವೀಟ್‌ ಮಾಡುತ್ತಿದ್ದ ಬಹುತೇಕರು, ‘ಸ್ವಚ್ಛ ಭಾರತ್‌’ ಮತ್ತು ‘ಭಾರತದಲ್ಲೇ ತಯಾರಿಸಿ’ ಅಭಿಯಾನದ ಬಗ್ಗೆ ರಾಹುಲ್‌ ಆಡಿದ ಮಾತು, ವಿದ್ಯಾರ್ಥಿನಿಯರು ಕೊಟ್ಟ ತಿರುಗೇಟನ್ನು ಹಾಸ್ಯದ ವಸ್ತುವಾಗಿಸಿಕೊಂಡರು.
*
ರಾಹುಲ್‌ ಪ್ರಶ್ನೆಗೆ ಸಿಕ್ಕಿದ ಉತ್ತರವೇನು?
ರಾಹುಲ್‌:
ಸ್ವಚ್ಛ ಭಾರತ ಕಾರ್ಯಕ್ರಮ ದೇಶದಲ್ಲಿ ನಿಜಕ್ಕೂ ಕಾರ್ಯನಿರ್ವಹಿಸುತ್ತಿದೆಯೇ?

ವಿದ್ಯಾರ್ಥಿನಿಯರು: ಹೌದು ನಿರ್ವಹಿಸುತ್ತಿದೆ.
ರಾ: ನಿಜವಾಗ್ಲೂ.. (ಆಶ್ಚರ್ಯದಿಂದ)
ವಿ: ಖಂಡಿತವಾಗಿಯೂ. ಇದರಲ್ಲಿ ಇನಿತೂ ಅನುಮಾನವೇ ಬೇಡ (ಒಕ್ಕೊರಲ ದನಿಯಲ್ಲಿ).
ರಾ:  ನನಗೇನೊ ಹಾಗನ್ನಿಸುತ್ತಿಲ್ಲ.
ರಾ: ಸ್ವಚ್ಛ ಭಾರತ ಹೋಗಲಿ, ಮೇಕ್‌ ಇನ್‌ ಇಂಡಿಯಾ (ಭಾರತದಲ್ಲಿ ತಯಾರಿಸಿ) ಏನಾಗಿದೆ?
ವಿ: ಖಂಡಿತಾ.. ಅದೂ ಕೆಲಸ ಮಾಡುತ್ತಿದೆ.
ರಾ: ನಿಜಕ್ಕೂ...
ವಿ: ಹೌದು, ಮೇಕ್‌ ಇನ್‌ ಇಂಡಿಯಾದ ಪರಿಣಾಮ ದೇಶದಲ್ಲಿ ಕಾಣಿಸುತ್ತಿದೆ.
ರಾ: ಯುವಕರಿಗೆ ಉದ್ಯೋಗ ಸೃಷ್ಟಿ ಆಗುತ್ತಿದೆಯೇ?
ವಿ: ಇಲ್ಲ.
ರಾ: ಹಾಗಾದರೆ, ನೀವು ಮೇಕ್‌ ಇನ್‌ ಇಂಡಿಯಾ  ಕೆಲಸ ಮಾಡುತ್ತೆ ಅನ್ನುತ್ತೀರಲ್ಲ. ನನಗೆ ಅರ್ಥವಾಗಲ್ಲ. ಹೋಗಲಿ ಬಿಡಿ..
*

ರಾಜಕೀಯದತ್ತ ಹೊರಳಿದ ಮಾತು
ಬೆಂಗಳೂರು:
‘ರಾಹುಲ್‌ ಗಾಂಧಿ ಆರಂಭದಲ್ಲಿ ಚೆನ್ನಾಗಿಯೇ ಮಾತನಾಡಿದರು. ಆದರೆ, ಪ್ರಶ್ನೋತ್ತರ ಸಮಯದಲ್ಲಿ ಅವರ ಮಾತು ರಾಜಕೀಯದತ್ತ ಹೊರಳಿತು. ಅದು ಬಹುತೇಕರಿಗೆ ಇಷ್ಟ ಆಗಲಿಲ್ಲ’ ಎಂದು ವಿದ್ಯಾರ್ಥಿನಿಯೊಬ್ಬರು ಸಂವಾದದ ನಂತರ ತಮ್ಮ ಅಭಿಪ್ರಾಯವನ್ನು ಸುದ್ದಿಗಾರರ ಜತೆ ಹಂಚಿಕೊಂಡರು.

‘ಆರಂಭದಲ್ಲಿ ಮಹಿಳಾ ಸಬಲೀಕರಣ, ಯುವ ಸಬಲೀಕರಣದ ಬಗ್ಗೆ ಚೆನ್ನಾಗಿಯೇ ಮಾತನಾಡಿದರು. ಯುವಕರು ಈ ದೇಶದ ಶಕ್ತಿ. ಅವರು ದೇಶದ ದಿಕ್ಕು ಬದಲಿಸಬಲ್ಲರು... ಎಂದೆಲ್ಲಾ ಮಾತನಾಡಿದರು. ಅದು ಎಲ್ಲರಿಗೂ ಹಿಡಿಸಿತು. ಆದರೆ, ಪ್ರಶ್ನೋತ್ತರ ಅವಧಿಯಲ್ಲಿ ರಾಜಕೀಯ ವಿಷಯ ಹೆಚ್ಚು ಹೆಚ್ಚು ಪ್ರಸ್ತಾಪವಾಯಿತು. ಅದು ಬಹುತೇಕರಿಗೆ ಅಪಥ್ಯವೆನಿಸಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT