ADVERTISEMENT

ವಿಮಾನ ಶೋಧಕ್ಕೆ ಇಸ್ರೊ ನೆರವು

ಮೂರು ದಿನವಾದರೂ ಪತ್ತೆ ಇಲ್ಲ: ಮುಂದುವರಿದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2016, 0:00 IST
Last Updated 25 ಜುಲೈ 2016, 0:00 IST
ವಿಮಾನ ಶೋಧಕ್ಕೆ ಇಸ್ರೊ ನೆರವು
ವಿಮಾನ ಶೋಧಕ್ಕೆ ಇಸ್ರೊ ನೆರವು   

ಚೆನ್ನೈ/ವಿಶಾಖಪಟ್ಟಣ (ಪಿಟಿಐ):  ಬಂಗಾಳ ಕೊಲ್ಲಿಯಲ್ಲಿ ಕಣ್ಮರೆಯಾಗಿದೆ ಎನ್ನಲಾದ ವಾಯುಪಡೆಯ ‘ಎಎನ್‌32’ ವಿಮಾನದ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದ್ದು, ಸತತ ಮೂರು ದಿನಗಳ ಬಳಿಕವೂ ವಿಮಾನದ ಯಾವುದೇ ಕುರುಹು ಪತ್ತೆಯಾಗಿಲ್ಲ.

ಶೋಧ ಕಾರ್ಯದಲ್ಲಿ ತೊಡಗಿರುವ ವಿವಿಧ ತಂಡಗಳು ಇದೀಗ ವಿಮಾನ ಕೊನೆಯ ಬಾರಿ ರೇಡಾರ್‌ ಸಂಪರ್ಕಕ್ಕೆ ಬಂದಿದ್ದ ಪ್ರದೇಶದ ಉಪಗ್ರಹ ಚಿತ್ರಗಳನ್ನು ಪಡೆದುಕೊಂಡಿವೆ.

  ಇಸ್ರೊ ಉಪಗ್ರಹ ಒಂದು ಪ್ರದೇಶವನ್ನು ಈಗಾಗಲೇ ಸೂಚಿಸಿದೆ. ಆ ಪ್ರದೇಶದಲ್ಲಿ ವ್ಯಾಪಕವಾಗಿ ಶೋಧ ನಡೆಸಲಾಗುತ್ತಿದೆ. ಆದರೆ ಅಲ್ಲಿ ಏನೂ ದೊರೆತಿಲ್ಲ. ಸೋಮವಾರದಿಂದ ಮತ್ತೊಂದು ಉಪಗ್ರಹವನ್ನು ಬಳಸಿಕೊಳ್ಳಲಾಗುತ್ತದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

‘ಪ್ರತಿಕೂಲ ಹವಾಮಾನ ಸವಾಲಾಗಿ ಪರಿಣಮಿಸಿದೆ. ಸತತ 24 ಗಂಟೆ ಶೋಧ ಕಾರ್ಯ ನಡೆಸುತ್ತಿದ್ದೇವೆ’ ಎಂದು ವಿಶಾಖಪಟ್ಟಣದ ಪೂರ್ವ ನೌಕಾ ಕಮಾಂಡ್‌ನ ಚೀಫ್‌ ವೈಸ್‌ ಎಡ್ಮಿರಲ್‌ ಎಚ್‌.ಸಿ.ಎಸ್‌. ಬಿಸ್ಟ್‌ ಹೇಳಿದ್ದಾರೆ.
‘ಕಾರ್ಯಾಚರಣೆ ಪ್ರದೇಶದಲ್ಲಿ ನೀರಿನ ಆಳ 3,500 ಮೀ. ನಷ್ಟಿದೆ. ಕೆಲವು ಪ್ರದೇಶಗಳಲ್ಲಿ ಅದಕ್ಕಿಂತಲೂ ಹೆಚ್ಚಿದೆ. ಆಳ ಹೆಚ್ಚಿದಂತೆ ಸವಾಲು ಹೆಚ್ಚುತ್ತಾ ಹೋಗುತ್ತದೆ’ ಎಂದಿದ್ದಾರೆ.

ವಿಮಾನದಲ್ಲಿದ್ದ 29 ಮಂದಿ ಕುಟುಂಬ ಸದಸ್ಯರಿಗೆ ಶೋಧ ಕಾರ್ಯಾಚರಣೆಯ ಬಗ್ಗೆ ಆಗಿಂದಾಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ದೂರು ದಾಖಲು:  ಈ ನಡುವೆ ವಾಯುಪಡೆ ಅಧಿಕಾರಿಗಳು ವಿಮಾನ ಕಾಣೆಯಾಗಿರುವ ಬಗ್ಗೆ ತಮಿಳುನಾಡು ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ.

‘ವಾಯುಪಡೆಯ ಎಎನ್‌–32 ಕಾಣೆಯಾಗಿದೆ ಎಂಬ ದೂರು ನಮಗೆ ಬಂದಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಭಾನುವಾರ ಹೇಳಿದ್ದಾರೆ.

ಪವಾಡ ನಡೆಯಲಿ (ಭಿವಾನಿ ವರದಿ): ‘ಏನಾದರೂ ಪವಾಡ ನಡೆದು ದೀಪಿಕಾ ಹಾಗೂ ವಿಮಾನದಲ್ಲಿದ್ದ ಇತರ 28 ಮಂದಿ ಸುರಕ್ಷಿತವಾಗಿ ಮರಳಿ ಬರಲಿ’

–ಹರಿಯಾಣದ ಭಿವಾನಿ ಜಿಲ್ಲೆಯ ಕುಟುಂಬವೊಂದು ಕಳೆದ ಮೂರು ದಿನಗಳಿಂದ ಈ ರೀತಿ ಪ್ರಾರ್ಥಿಸುತ್ತಿದೆ.

ಕಣ್ಮರೆಯಾಗಿರುವ ವಿಮಾನದಲ್ಲಿ ಭಿವಾನಿಯ ಫ್ಲೈಟ್‌ ಲೆಫ್ಟಿನೆಂಟ್‌ ದೀಪಿಕಾ ಶೋರಾನ್‌ ಅವರೂ ಇದ್ದರು. ‘ಆಕೆ ನಮ್ಮ ಜತೆ ವಾರ್ಷಿಕ ರಜಾದಿನ ಕಳೆದು ಪೋರ್ಟ್‌ಬ್ಲೇರ್‌ಗೆ ವಾಪಸಾಗುತ್ತಿದ್ದಳು’ ಎಂದು ದೀಪಿಕಾ ತಾಯಿ ಪ್ರೇಮಲತಾ ಹೇಳಿದ್ದಾರೆ.

ಕಂಪ್ಯೂಟರ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ದೀಪಿಕಾ 2013 ರಲ್ಲಿ ಫ್ಲೈಟ್‌ ಲೆಫ್ಟಿನೆಂಟ್‌ ಆಗಿ ಭಾರತೀಯ ವಾಯುಪಡೆ ಸೇರಿದ್ದರು. ಹೋದ ವರ್ಷದ ನ. 22ರಂದು ಕುಲದೀಪ್‌ ದಲಾಲ್‌ ಅವರನ್ನು ವರಿಸಿದ್ದರು.

  ಕರಾವಳಿ ಪಡೆಯಲ್ಲಿ ಸಹಾಯಕ ಕಮಾಂಡೆಂಟ್‌ ಆಗಿರುವ ದಲಾಲ್‌ ಪೋರ್ಟ್‌ಬ್ಲೇರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು  ಹೋದ ತಿಂಗಳಷ್ಟೆ ಪೋರ್ಟ್‌ಬ್ಲೇರ್‌ನಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT