ADVERTISEMENT

ವೇಶ್ಯಾವಾಟಿಕೆ ಕಾನೂನುಬದ್ಧ ‘ಸುಪ್ರೀಂ’ ಸಮಿತಿಗೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 19:30 IST
Last Updated 29 ಅಕ್ಟೋಬರ್ 2014, 19:30 IST

ನವದೆಹಲಿ (ಐಎಎನ್‌ಎಸ್‌): ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವ ಪ್ರಸ್ತಾವವನ್ನು ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ರಚಿಸಿರುವ ಸಮಿತಿಯ ಮುಂದೆ ನವೆಂಬರ್‌ 8ರಂದು ಇರಿಸಲಾಗುವುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ಲಲಿತಾ ಕುಮಾರಮಂಗಳಂ ಹೇಳಿದ್ದಾರೆ.

ಲೈಂಗಿಕ ಕಾರ್ಯಕರ್ತರ ಪುನರ್ವಸತಿಗೆ ಸಂಬಂಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು 2010ರಲ್ಲಿ ಸಲ್ಲಿಕೆಯಾದ ನಂತರ ಸುಪ್ರೀಂ ಕೋರ್ಟ್‌ ಈ ಸಮಿತಿಯನ್ನು ನೇಮಕ ಮಾಡಿತ್ತು. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಈ ಸಮಿತಿಯ ಸಭೆಯಲ್ಲಿ ಭಾಗವಹಿಸಬೇಕು ಎಂದು 2011ರ ಆಗಸ್ಟ್‌ 24ರಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಲೈಂಗಿಕ ಕಾರ್ಯಕರ್ತರು ಘನತೆಯಿಂದ ಬದುಕುವುದು ಸಾಧ್ಯವಾಗುವಂತೆ 1956ರ ಅನೈತಿಕ ಸಾಗಾಟ (ತಡೆ) ಕಾಯ್ದೆಗೆ (ಐಟಿಪಿಎ) ತಿದ್ದುಪಡಿಗಳನ್ನು ಸಮಿತಿಯು ಸೂಚಿಸಬೇಕಿದೆ.

ಐಟಿಪಿಎಯ ನಿಯಮಗಳು, ಅದರಲ್ಲಿರುವ ಕೊರತೆಗಳು, ಅದರ ಅನುಷ್ಠಾನ, ಅನುಷ್ಠಾನದಿಂದ ಲೈಂಗಿಕ ಕಾರ್ಯಕರ್ತರ ಜೀವನದ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸುವುದು ಸಮಿತಿಯ ಉದ್ದೇಶವಾಗಿದೆ. ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸುವ ಪ್ರಸ್ತಾವವನ್ನು ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂಬ ವರದಿಗಳನ್ನು ಲಲಿತಾ ಕುಮಾರಮಂಗಳಂ ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.