ADVERTISEMENT

ವೈಷ್ಣೋದೇವಿ ಮೂಲಶಿಬಿರಕ್ಕೆ ರೈಲು

ಉಧಂಪುರ– ಕಟರಾ ರೈಲು ಮಾರ್ಗ ಪ್ರಧಾನಿಯಿಂದ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2014, 19:30 IST
Last Updated 4 ಜುಲೈ 2014, 19:30 IST

ಕಟರಾ (ಜಮ್ಮು ಮತ್ತು ಕಾಶ್ಮೀರ) (ಪಿಟಿಐ): ‘ಅಭಿವೃದ್ಧಿ ಮೂಲಕ ನಾವು (ಕೇಂದ್ರ ಸರ್ಕಾರ) ಜಮ್ಮು ಮತ್ತು ಕಾಶ್ಮೀರದ ಜನರ ಹೃದಯ ಗೆಲ್ಲಲು ಬಯುಸುತ್ತೇವೆ. ಬಹಳಷ್ಟು ಸಮಸ್ಯೆ, ಅಡ್ಡಿ–ಆತಂಕ­ಗಳನ್ನು ಎದುರಿಸುತ್ತಿರುವ ಈ ರಾಜ್ಯದಲ್ಲಿ ಶಾಂತಿ ನೆಲೆಸ­ಬೇಕು ಮತ್ತು ಪ್ರಗತಿ ಕಾಣಬೇಕೆಂಬುದು ನಮ್ಮ ಅಪೇಕ್ಷೆ’ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದರು.

ಜಮ್ಮುವಿನಿಂದ ಕಾಶ್ಮೀರ ಕಣಿವೆಯ ಬಾರಾ­ಮುಲ್ಲಾಗೆ ನೇರ ರೈಲು ಸಂಪರ್ಕ ಕಲ್ಪಿಸುವ ಮಹತ್ವಾ­ಕಾಂಕ್ಷೆ ಯೋಜನೆಯ ಭಾಗವಾದ ಉಧಂಪುರ– ಕಟರಾ ನಡುವಿನ 25 ಕಿ.ಮೀ. ದೂರದ ರೈಲು ಸಂಚಾರಕ್ಕೆ ಮೋದಿ ಅವರು ಶುಕ್ರವಾರ ಹಸಿರು ನಿಶಾನೆ ತೋರಿ ಮಾತನಾಡಿದರು.

ವೈಷ್ಣೋದೇವಿ ಯಾತ್ರೆಯ ಮೂಲ ಶಿಬಿರವಾದ ಕಟರಾಗೆ ಸಂಚರಿಸುವ ರೈಲಿಗೆ ‘ಶ್ರೀಶಕ್ತಿ ಎಕ್ಸ್‌ಪ್ರೆಸ್‌’ ಎಂದು ಹೆಸರಿಸಲು ಸಲಹೆ ನೀಡಿದ ಮೋದಿ, ‘ಇದು ಈ ರಾಜ್ಯದ ಜನತೆಗೆ ಮಾತ್ರ ಕೊಡುಗೆಯಲ್ಲ. ಇಡೀ ದೇಶಕ್ಕೆ ಸಂದ ಉಡುಗೊರೆ. ದೇಶದ ವಿವಿಧೆಡೆಯಿಂದ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಇಲ್ಲಿಗೆ ಬರುವ ವೈಷ್ಣೋ­ದೇವಿ ಯಾತ್ರಾರ್ಥಿಗಳಿಗೆ ಅಭಿನಂದನೆಗಳು’ ಎಂದರು.

‘ಈ ಹೊಸ ರೈಲು ಮಾರ್ಗವು ಕಣಿವೆ ರಾಜ್ಯದ ಅಭಿವೃದ್ಧಿಯ ವೇಗವನ್ನು ದುಪ್ಪಟ್ಟುಗೊಳಿಸುತ್ತದೆ’ ಎಂದ ಅವರು, ‘ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಂದ ಆರಂಭವಾದ ಅಭಿವೃದ್ಧಿಯ ಯಾನ ಮುಂದುವರಿಯಲಿದೆ’ ಎಂದರು.

ಪ್ರಧಾನಿ ಮೋದಿ ಅವರು ಯಾವೊಂದು ವಿವಾದಾತ್ಮಕ ರಾಜಕೀಯ ವಿಷಯವನ್ನೂ  ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಲಿಲ್ಲ.
ಕಟರಾ ರೈಲು ನಿಲ್ದಾಣದಲ್ಲಿ ನಡೆದ ಈ ಸಮಾರಂಭದಲ್ಲಿ ಭಾಗವಹಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ, ಈ ರೈಲು ಮಾರ್ಗದ ಬನಿಹಾಲ್‌ವರೆಗಿನ ಕಾಮಗಾರಿ ತ್ವರಿತವಾಗಿ ನಡೆಯಬೇಕು ಮತ್ತು ಜಮ್ಮು ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.