ADVERTISEMENT

ಶಿಕ್ಷಣ ಮಾಧ್ಯಮ: ರಾಜ್ಯದ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2014, 20:10 IST
Last Updated 11 ಸೆಪ್ಟೆಂಬರ್ 2014, 20:10 IST

ನವದೆಹಲಿ: ಮಾತೃಭಾಷೆ ಶಿಕ್ಷಣ ನೀತಿ ಕುರಿತು ನೀಡಿರುವ ತೀರ್ಪನ್ನು ಪುನರ್‌ ಪರಿಶೀಲಿಸುವಂತೆ ಮನವಿ ಮಾಡಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ವಜಾ ಮಾಡಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿ ಆರ್.ಎಂ. ಲೋಧಾ ನೇತೃ­ತ್ವದ ಸಂವಿಧಾನ ಪೀಠವು ರಾಜ್ಯದ ಪುನರ್‌ ಪರಿಶೀಲನಾ ಅರ್ಜಿಯನ್ನು ವಜಾ ಮಾಡಿದ್ದರಿಂದ ಮೇ 6ರಂದು ಇದೇ ಪೀಠ ನೀಡಿದ್ದ ತೀರ್ಪನ್ನು ಎತ್ತಿ ಹಿಡಿ­ದಂತಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಕಾನೂನು ಹೋರಾ­ಟಕ್ಕಿದ್ದ ಎಲ್ಲ ಸಾಧ್ಯತೆಗಳು ಮುಗಿದಂತಾಗಿದೆ.

ಪ್ರಾಥಮಿಕ ಹಂತದಲ್ಲಿ ಮಕ್ಕಳ ಮಾತೃಭಾಷೆ ಸೇರಿದಂತೆ ಯಾವುದೇ ಶಿಕ್ಷಣ ಮಾಧ್ಯಮವನ್ನು ರಾಜ್ಯ ಸರ್ಕಾರ ಮಕ್ಕಳ ಮೇಲೆ ಹೇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠ ಘೋಷಿಸಿತ್ತು. ಶಿಕ್ಷಣ ಮಾಧ್ಯಮ ಕುರಿತು ನಿರ್ಧಾರ ಮಾಡುವ ಅಧಿಕಾರ ಇರುವುದು ಮಕ್ಕಳಿಗೆ, ಅವರ ಪೋಷಕ­ರಿಗೆ ಮಾತ್ರ. ಈ ವಿಷಯದಲ್ಲಿ   ರಾಜ್ಯ ಹಸ್ತಕ್ಷೇಪ ಮಾಡುವುದರಿಂದ ಅವರ ಮೂಲಭೂತ ಹಕ್ಕಿಗೆ ಧಕ್ಕೆ ಆಗಲಿದೆ ಎಂದು ಕೋರ್ಟ್‌ ಹೇಳಿತ್ತು.

ಸಂವಿಧಾನದ 19 (1) (ಎ) ಕಲಂ­ನಲ್ಲಿ ಖಾತರಿ ಕೊಡಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮಗುವಿನ ಪ್ರಾಥಮಿಕ ಶಿಕ್ಷಣ ಮಾಧ್ಯಮ ಆಯ್ಕೆ ಸ್ವಾತಂತ್ರ್ಯ ಒಳ­ಗೊಳ್ಳಲಿದೆ. ಮಗುವಿನ ಮಾತೃ ಭಾಷೆ­ಯಲ್ಲಿ ಕಲಿಸಿದರೆ ಹೆಚ್ಚು ಲಾಭವಾಗ­ಲಿದೆ ಎಂಬ ಕಾರಣದಿಂದ ರಾಜ್ಯ ಸರ್ಕಾರ ಮಗು ಮತ್ತು ಅದರ ಪೋಷ­ಕರ ಆಯ್ಕೆ ಸ್ವಾತಂತ್ರ್ಯದಲ್ಲಿ  ಮೂಗು ತೂರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಮಾಧ್ಯಮ ಯಾವುದಿರಬೇಕು ಎಂದು ತೀರ್ಮಾನ ಮಾಡುವ ಅಧಿಕಾರ ಮಗು, ಅದರ ಪೋಷಕರು ಅಥವಾ ಪಾಲಕರಿಗೆ ಸಂಬಂಧಪಟ್ಟಿದ್ದು ಎಂದು ನ್ಯಾಯಾಲಯ ವ್ಯಾಖ್ಯಾನಿಸಿತ್ತು.

ಮಗುವಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಿದರೆ ಚೆನ್ನಾಗಿ ಕಲಿಯುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ ಇರಬಹುದು. ಆದರೆ, ಖಾಸಗಿ ಅನುದಾನಿತ ಶಾಲೆಗಳು ಮತ್ತು ಅನುದಾ­ನೇತರ ಶಾಲೆಗಳಿಗೆ ಮಾನ್ಯತೆ ಕೊಡಲು ಇದು ಪೂರ್ವ ಷರತ್ತು ಆಗಬಾರದು. ಈ ರೀತಿಯ ಒತ್ತಡಗಳೂ ಭಾಷಾ ಅಲ್ಪ­ಸಂಖ್ಯಾತ ಶಿಕ್ಷಣ ಸಂಸ್ಥೆಗಳು ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಆಗಲಿದೆ ಎಂದು ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠ ತಿಳಿಸಿತ್ತು.

ಸಂವಿಧಾನದ ಕಲಂ 350 (ಎ) ಪ್ರಕಾರ, ಭಾಷಾ ಅಲ್ಪ­ಸಂಖ್ಯಾತ ಶಾಲೆಗಳು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಅವರ­ವರ ಮಾತೃಭಾಷೆ­ಯಲ್ಲೇ ಶಿಕ್ಷಣ ನೀಡಬೇಕೆಂದು ಒತ್ತಾಯಿ­ಸುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದೂ ನ್ಯಾಯಾಲಯ ಘೋಷಿಸಿತ್ತು.

ಮುಖ್ಯ ನ್ಯಾಯ­ಮೂರ್ತಿ ಲೋಧಾ ಅವರ ನೇತೃತ್ವದ ಸಂವಿಧಾನ ಪೀಠ ರಾಜ್ಯ ಸರ್ಕಾರದ ಪುನರ್‌ ಪರಿಶೀಲನಾ ಅರ್ಜಿ ವಜಾ ಮಾಡಿ­ರುವುದರಿಂದ ಮೇ 6ರ ಆದೇಶ ಜಾರಿಯಲ್ಲಿ ಉಳಿಯಲಿದೆ. ಸುಪ್ರೀಂ ಕೋರ್ಟ್‌ ಮೇ 6ರಂದು ತೀರ್ಪು ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾ­ಮಯ್ಯ ಭಾಷಾ ನೀತಿಗೆ ಸೂಕ್ತ ತಿದ್ದುಪಡಿ ಮಾಡಿ ಮಾತೃಭಾಷೆ ಶಿಕ್ಷಣ ಮಾಧ್ಯಮಕ್ಕೆ ಶಕ್ತಿ ತುಂಬುವಂತೆ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT