ADVERTISEMENT

ಸಾಮರಸ್ಯ ಕದಡುವ ಯಾರನ್ನೂ ಬಿಡೆವು: ರಾಜನಾಥ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 14:42 IST
Last Updated 1 ಡಿಸೆಂಬರ್ 2015, 14:42 IST

ನವದೆಹಲಿ (ಪಿಟಿಐ): ದಾದ್ರಿ ಘಟನೆ ಹಾಗೂ ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಗಳನ್ನು ಸಿಬಿಐಗೆ ತನಿಖೆಗೆ ವಹಿಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಸ್ಪಷ್ಟಪಡಿಸಿದರು.

ಲೋಕಸಭೆಯಲ್ಲಿ ‘ಅಸಹಿಷ್ಣತೆ’ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಎನ್‌ಡಿಎ ಆಡಳಿತಾವಧಿಯಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ವಾದವನ್ನು ಅಲ್ಲಗಳೆದರು.

ಮರಳಿಸಿರುವ ಪ್ರಶಸ್ತಿಗಳನ್ನು ವಾಪಸ್‌ ಪಡೆಯುವಂತೆ ಲೇಖಕರು, ಕಲಾವಿದರು ಹಾಗೂ ವಿಜ್ಞಾನಿಗಳಲ್ಲಿ ಮತ್ತೊಮ್ಮೆ ಮನವಿ ಮಾಡಿದರು. ರಾಜನಾಥ್ ಅವರ ಮಾತನಾಡುವ ವೇಳೆಗೆ ಬಹುತೇಕ ವಿರೋಧ ಪಕ್ಷಗಳು ಸದನದಿಂದ ಹೊರ ನಡೆದಿದ್ದರು.

‘ಸಾಮಾಜಿಕ ಹಾಗೂ ಧಾರ್ಮಿಕ ಸಾಮರಸ್ಯ ಕದಡಲು ಪ್ರಯತ್ನಿಸುವ ಯಾರನ್ನೂ ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಅವರ ಪರವಾಗಿ ಹಾಗೂ ಸ್ವಯಂ ನಾನು ಈ ಸದನಕ್ಕೆ ಆಶ್ವಾಸನೆ ನೀಡುತ್ತೇನೆ’ ಎಂದು ರಾಜನಾಥ್ ನುಡಿದರು.

ADVERTISEMENT

ಅಲ್ಲದೇ, ‘ಸಹಿಷ್ಣುತೆಯ ಚೈತನ್ಯವನ್ನು ಹೆಚ್ಚಿಸಲು ಕೈಜೋಡಿಸುವಂತೆ ಎಲ್ಲ ಸಂಸದರು ಹಾಗೂ ಈ ದೇಶದ ಜನರಲ್ಲಿ ನಾನು ಮನವಿ ಮಾಡುವೆ’ ಎಂದರು.

ಕರ್ನಾಟಕ ಬಯಸಿದರೇ ಸಿಬಿಐ ತನಿಖೆ: ಇದೇ ವೇಳೆ, ವಿರೋಧ ಪಕ್ಷಗಳ ಸದಸ್ಯರು ಎತ್ತಿದ ಪ್ರಶ್ನೆಗಳಿಗೆ, ಚುರುಕಿನಿಂದ ಚುಟುಕಾಗಿ ರಾಜನಾಥ್ ಉತ್ತರಿಸಿದರು.

ದಾದ್ರಿ ಘಟನೆಯನ್ನು ಸಿಬಿಐಗೆ ವಹಿಸಲು ಸರ್ಕಾರ ಈಗಲೂ ಸಿದ್ಧವಿದೆ. ಆದರೆ, ಉತ್ತರ ಪ್ರದೇಶ ಸರ್ಕಾರವು ಘಟನೆಯನ್ನು ಸಿಬಿಐಗೆ ತನಿಖೆಗೆ ಶಿಫಾರಸು ಮಾಡಿಲ್ಲ ಎಂದರು.

ಮುಂದುವರೆದು, ‘ಅಂತೆಯೇ ಕರ್ನಾಟಕ ಸರ್ಕಾರ ಬಯಸಿದರೆ ವಿಮರ್ಶಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣವನ್ನು ಸಿಬಿಐಗೆ ತನಿಖೆಗೆ ಆದೇಶಿಸಿಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದರು.

ಅಲ್ಲದೇ, ಕಲಬುರ್ಗಿ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆ ನಡೆಯುತ್ತಿದೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.