ADVERTISEMENT

ಸೋನಿಯಾ ವಿರುದ್ಧ ಮೋದಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2014, 11:16 IST
Last Updated 6 ಏಪ್ರಿಲ್ 2014, 11:16 IST

ಅಲಿಗಡ (ಪಿಟಿಐ): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಮಾಜವಾದಿ ಪಾರ್ಟಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ‘ವೋಟ್ ಬ್ಯಾಂಕ್’ ರಾಜಕಾರಣ ಮಾಡುವ ಮೂಲಕ ಮುಸ್ಲಿಂ ಸಮುದಾಯವನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಭಾನುವಾರ ವಾಗ್ದಾಳಿ ನಡೆಸಿದರು.

ಪಕ್ಷದ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ, ರಾಷ್ಟ್ರದಲ್ಲಿ ಸೋನಿಯಾ ಗಾಂಧಿ ಅವರ ಕಣ್ಣೆದುರೇ ಒಂದು ವರ್ಷದಲ್ಲಿ 700 ಕೋಮು ಗಲಭೆಗಳು ನಡೆದಿವೆ. ಮುಲಾಯಂ ಸಿಂಗ್ ಯಾದವ್ ಅವರ ಉತ್ತರ ಪ್ರದೇಶ ಒಂದರಲ್ಲೇ 250 ಕೋಮು ಗಲಭೆಗಳು ಜರುಗಿವೆ ಎಂದು ಆರೋಪಿಸಿದರು.

‘ರಾಷ್ಟ್ರದಲ್ಲಿ ಮುಸ್ಲಿಂ ಸಮುದಾಯದ ಜನರು ಹೆಚ್ಚಾಗಿರುವ 90 ಜಿಲ್ಲೆಗಳ ಅಭಿವೃದ್ಧಿಗೆ ಸೋನಿಯಾ ಗಾಂಧಿ ಅವರು 15 ಅಂಶಗಳ ಕಾರ್ಯಕ್ರಮ ಪ್ರಕಟಿಸಿದ್ದರು. ಆದರೆ, ಇಲ್ಲಿ ಒಂದು ವರ್ಷದಲ್ಲಿ ಒಂದು ಪೈಸೆಯ ಅಭಿವೃದ್ಧಿ ಕಾರ್ಯವೂ ನಡೆದಿಲ್ಲ. ಮುಸ್ಲಿಂ ಸಮುದಾಯವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದು ಒಂದು ಉದಾಹರಣೆ ಎಂದು ದೂರಿದರು.

ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಪಕ್ಷಗಳು ‘ವೋಟ್ ಬ್ಯಾಂಕ್’ ರಾಜಕಾರಣ ಮತ್ತು ಜಾತ್ಯತೀತದ ಹಾಡನ್ನು ಹಾಡುತ್ತಿವೆ. ಜಾತ್ಯತೀತದ ಬಗ್ಗೆ ಕೇವಲ ಮಾತನಾಡುವ ಈ ಪಕ್ಷಗಳು ಎಲ್ಲ ಸಮುದಾಯದ ಬಡ ಜನರನ್ನು ಕೆಳ ಸ್ತರದಲ್ಲಿಯೇ ಇಡುವ ರಾಜಕೀಯ ಮಾಡುತ್ತಿವೆ ಎಂದು ಅವರು ಆಪಾದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.