ADVERTISEMENT

`ಸೌದಿ ಅರೇಬಿಯಾ ಹೊಸ ಕಾರ್ಮಿಕ ನೀತಿ- ಗಂಭೀರ ವಿಷಯ'

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2013, 19:59 IST
Last Updated 28 ಮಾರ್ಚ್ 2013, 19:59 IST

ತಿರುವನಂತಪುರ (ಐಎಎನ್‌ಎಸ್): `ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸಿರುವ ಸೌದಿ ಅರೇಬಿಯಾದ ಹೊಸ ಕಾರ್ಮಿಕ ನೀತಿಯಿಂದ ಭಾರತೀಯರಿಗೆ ಉದ್ಯೋಗಾವಕಾಶ ಕಡಿಮೆಯಾಗಲಿದೆ. ಹಾಗಾಗಿ ಇದು ಗಂಭೀರ ವಿಷಯ' ಎಂದು ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ ಹೇಳಿದ್ದಾರೆ.

`ಈ ಕುರಿತು ಸೌದಿ ಅರೇಬಿಯಾದಲ್ಲಿರುವ ಭಾರತದ ರಾಯಭಾರಿಯೊಂದಿಗೆ ಬುಧವಾರ ಚರ್ಚಿಸಿದ್ದೇನೆ. ಈ ವಿಷಯದಲ್ಲಿ ಆಗುವ ಪ್ರತಿಯೊಂದು ಬೆಳವಣಿಗೆಯನ್ನು ಗಮನಕ್ಕೆ ತರುವಂತೆ ಅವರಿಗೆ ಸೂಚಿಸಿದ್ದೇನೆ' ಎಂದು ಅವರು ಟಿ ವಿ ವಾಹಿನಿಗಳಿಗೆ ತಿಳಿಸಿದ್ದಾರೆ.

ಹೊಸ ಕಾರ್ಮಿಕ ನೀತಿ ಅನುಷ್ಠಾನಕ್ಕೆ ಬುಧವಾರದವರೆಗೂ ಸೌದಿ ಆಡಳಿತ ಗಡುವು ನೀಡಿತ್ತು. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಲ್ಲೂ ಸ್ಥಳೀಯರಿಗೆ ಶೇ 10ರಷ್ಟು ಉದ್ಯೋಗಾವಕಾಶ ಕಲ್ಪಿಸಬೇಕು ಎಂಬ ನೀತಿಯಿಂದಾಗಿ ಉದ್ಯೋಗಾಕಾಂಕ್ಷಿಗಳಾದ ಭಾರತೀಯರಿಗೆ ತೀವ್ರ ತೊಂದರೆಯಾಗಿದೆ. 

ಸಾಗರೋತ್ತರ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ 2011ರ ವಾರ್ಷಿಕ ವರದಿಯಲ್ಲಿ ಸೌದಿ ಅರೇಬಿಯಾವು ಅರೆ ಕೌಶಲ್ಯ ಹೊಂದಿರುವ ಭಾರತೀಯರಿಗೆ ಉದ್ಯೋಗ ನೀಡುವ ಉತ್ತಮ ತಾಣ ಎಂದು ಹೇಳಲಾಗಿದೆ. 2,89,297 ಭಾರತೀಯರು ಅಲ್ಲಿ ಉದ್ಯೋಗಿಗಳಾಗಿದ್ದಾರೆ ಇವರಲ್ಲಿ ಬಹುಪಾಲು ಕೇರಳಿಗರು ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.