ADVERTISEMENT

ಸ್ಟೈಲಿಶ್‌, ಸ್ಫುರದ್ರೂಪಿ ಮತ್ತು ಸಜ್ಜನ!

ಬಿ.ಎಂ.ಹನೀಫ್
Published 27 ಏಪ್ರಿಲ್ 2017, 19:30 IST
Last Updated 27 ಏಪ್ರಿಲ್ 2017, 19:30 IST
ಸ್ಟೈಲಿಶ್‌, ಸ್ಫುರದ್ರೂಪಿ ಮತ್ತು ಸಜ್ಜನ!
ಸ್ಟೈಲಿಶ್‌, ಸ್ಫುರದ್ರೂಪಿ ಮತ್ತು ಸಜ್ಜನ!   

ವಿನೋದ್‌ ಖನ್ನಾ! ಬಾಲಿವುಡ್‌ ಕಂಡ ಕೆಲವೇ ಕೆಲವು ಅತ್ಯಾಕರ್ಷಕ ವ್ಯಕ್ತಿತ್ವದ, ಸ್ಟೈಲಿಶ್‌ ಹೀರೋಗಳಲ್ಲಿ ಮುಂಚೂಣಿಯ ಹೆಸರು. 60ರ ದಶಕದ ಕೊನೆಯಲ್ಲಿ ಆರಂಭಿಸಿದ ನಟನಾ ಯಾತ್ರೆ, 2015ರವರೆಗೂ ನಿರಂತರವಾಗಿ ನಡೆಯಿತು. ಪೋಷಕ ಪಾತ್ರಗಳಿಂದ ವೃತ್ತಿಜೀವನ ಆರಂಭಿಸಿ, ಹೀರೊ ಮತ್ತು ವಿಲನ್‌ ಪಾತ್ರಗಳೆರಡರಲ್ಲೂ ಸಮಾನ­ವಾಗಿ ಮಿಂಚಿದ ನಟನಾ ಪ್ರತಿಭೆ. ಸುಮಾರು ಐದು ದಶಕಗಳಲ್ಲಿ ವಿನೋದ್‌ ಖನ್ನಾ ಚಿತ್ರರಂಗದಲ್ಲಿ ಇದ್ದುಕೊಂಡು ಸಾಧಿಸಿದ ವೈವಿಧ್ಯ ಅಪಾರ.

ಖನ್ನಾ ವೃತ್ತಿಜೀವನಕ್ಕೊಂದು ಹಿನ್ನೋಟ ಹಾಯಿಸಿದರೆ ಸ್ವಾರಸ್ಯಕರ ಸಂಗತಿಗಳು ಕಾಣುತ್ತವೆ. 145ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಈ ನಟ, ಮಲ್ಟಿಸ್ಟಾರ್‌ ಸಿನಿಮಾಗಳಲ್ಲಿ ಮೊದಲ ಹೀರೋ­ಗಿಂತಲೂ ಹೆಚ್ಚು ಪ್ರಾಮುಖ್ಯತೆ ಪಡೆದಾತ. 70ರ ದಶಕದ ಉತ್ತರಾರ್ಧದಲ್ಲಿ ಜಿತೇಂದ್ರ ಮತ್ತು ಅಮಿತಾಭ್‌ ಬಚ್ಚನ್‌ ಜತೆಗೇ ನಟಿಸಿ, (ಪರ್ವರಿಶ್‌ ಮತ್ತು ಅಮರ್‌ ಅಕ್ಬರ್‌ ಅಂಥೊಣಿ) ಅವರಿಗಿಂತಲೂ ಹೆಚ್ಚು ಸಂಭಾವನೆ ಪಡೆದಾತ. 80ರ ದಶಕದ ಉತ್ತರಾರ್ಧದಲ್ಲಿ ತನ್ನ ಜತೆಗೆ ನಟಿಸಿದ ಹೀರೋಗಳಾದ ರಿಷಿ ಕಪೂರ್‌, ಗೋವಿಂದ, ಸಂಜಯ್‌ದತ್‌, ರಜನಿಕಾಂತ್‌, ಸಲ್ಮಾನ್‌ ಖಾನ್‌ಗಿಂತಲೂ ಹೆಚ್ಚು ಸಂಭಾವನೆ ವಿನೋದ್‌ ಖನ್ನಾಗೆ ದೊರೆಯುತ್ತಿತ್ತು!

ಬೇಡಿಕೆಯ ಉತ್ತುಂಗದಲ್ಲಿದ್ದಾಗಲೇ 1982ರಲ್ಲಿ ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ತನ್ನ ಗುರು ಓಶೊ ರಜನೀಶ್‌ ಬೆನ್ನುಹತ್ತಿ ಅಮೆರಿಕಕ್ಕೆ ಹೋದ ವಿನೋದ್‌ ಖನ್ನಾ, ಐದು ವರ್ಷ ಮುಂಬೈ ಕಡೆ ತಲೆ ಹಾಕಲೇ ಇಲ್ಲ. ಮತ್ತೆ 1987ರಲ್ಲಿ ಮರಳಿ ಬಂದು ಡಿಂಪಲ್‌ ಕಪಾಡಿಯಾ ಜತೆಗೆ ‘ಇನ್ಸಾಫ್‌’ ಎನ್ನುವ ಸಿನಿಮಾದಲ್ಲಿ ನಟಿಸಿದಾಗ, ಜನ ಮುಗಿಬಿದ್ದು ನೋಡಿದರು. ಸಿನಿಮಾ ಸೂಪರ್‌ಹಿಟ್ ಆಯಿತು.

ADVERTISEMENT

ಖನ್ನಾ ಜತೆಗೆ ನಟಿಸಿದ ಹೀರೋಯಿನ್‌ಗಳತ್ತ ಕಣ್ಣು ಹಾಯಿಸಿ­ದರೆ, ನಾಲ್ಕು ದಶಕಗಳ ನಟೀಮಣಿಯರ ದೊಡ್ಡ ಪಟ್ಟಿಯೇ ಸಿಗುತ್ತದೆ! 1988ರಲ್ಲಿ ‘ದಯಾವಾನ್‌’ (ಇದು ಕಮಲಹಾಸನ್‌ ನಟಿಸಿದ ‘ನಾಯಗನ್‌’ ರಿಮೇಕ್‌) ಚಿತ್ರದಲ್ಲಿ ವಿನೋದ್‌ ಖನ್ನಾಗೆ ಹೀರೋಯಿನ್‌ ಆಗಿದ್ದಾಕೆ ಆತನಿಗಿಂತ  21 ವರ್ಷ ಚಿಕ್ಕವಳಾಗಿದ್ದ ಮಾಧುರಿ ದೀಕ್ಷಿತ್! ಚಿತ್ರದ ರೊಮ್ಯಾಂಟಿಕ್‌ ಹಾಡೊಂದರಲ್ಲಿ ಈ ವಯಸ್ಸಿನ ಅಂತರ ಪ್ರೇಕ್ಷಕರಿಗೆ ಎದ್ದು ಕಾಣಲೇ ಇಲ್ಲ. ಏಕೆಂದರೆ ವಿನೋದ್‌ ಖನ್ನಾ ನಿಜಕ್ಕೂ ‘ಯಂಗ್‌ ಆ್ಯಂಡ್‌ ಹ್ಯಾಂಡ್‌ಸಮ್‌!’

1980ರಲ್ಲಿ ತೆರೆಗೆ ಬಂದ ಫಿರೋಜ್‌ ಖಾನ್‌ ಚೊಚ್ಚಲ ನಿರ್ದೇಶನದ ‘ಖುರ್ಬಾನಿ’ ಬಾಕ್ಸಾಫೀಸ್‌ನಲ್ಲಿ ಅತ್ಯಧಿಕ ಕಲೆಕ್ಷನ್‌ ನ ದಾಖಲೆ ನಿರ್ಮಿಸಿತು.
ಹಿಂದಿಯಲ್ಲಿ ಸುಮಾರು 47 ಮಲ್ಟಿಹೀರೊ ಸಿನಿಮಾಗಳಲ್ಲಿ ನಟಿಸಿದ ಏಕೈಕ ನಟ ವಿನೋದ್‌ ಖನ್ನಾ. ರಾಜ್‌ಕುಮಾರ್‌, ಶಶಿಕಪೂರ್‌, ಅಮಿತಾಭ್‌ ಬಚ್ಚನ್‌, ರಣಧೀರ್‌ ಕಪೂರ್‌, ಸುನಿಲ್‌ ದತ್‌, ಜಿತೇಂದ್ರ, ಧರ್ಮೇಂದ್ರ– ಹೀಗೆ ಆ ಕಾಲದ ಹೀರೋಗಳೆಲ್ಲ ಸಿನಿಮಾ ಕ್ಲಿಕ್‌ ಆಗಲು ವಿನೋದ್‌ ಖನ್ನಾ ಜತೆಗೂಡಿದವರೇ! ನಿಕಟ ಸ್ನೇಹಿತರಾಗಿದ್ದ ರಾಜೇಶ್‌ ಖನ್ನಾ ಚಿತ್ರದಲ್ಲಿ ವಿನೋದ್‌ ಪೋಷಕ ಪಾತ್ರ ವಹಿಸಿದ್ದುಂಟು.

1971ರಲ್ಲಿ ವಿನೋದ್‌ ಖನ್ನಾ ಹೀರೊ ಆಗಿ ನಟಿಸಿದ ಮೊದಲ ಚಿತ್ರ ‘ಹಮ್‌ ತುಮ್‌ ಔರ್‌ ವೊ’ ನಲ್ಲಿ ನಾಯಕಿ ಆಗಿದ್ದುದು ನಮ್ಮ ಭಾರತಿ ವಿಷ್ಣುವರ್ಧನ್‌!
ಬಾಲಿವುಡ್‌ನಿಂದ ಚುನಾವಣೆಯ ಮೂಲಕ ರಾಜಕೀಯಕ್ಕೆ ಇಳಿದ ಮೊದಲ ನಟ ವಿನೋದ್‌ ಖನ್ನಾ. 1997ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಪಂಜಾಬಿನ ಗುರುದಾಸ್‌ಪುರ ದಿಂದ ಲೋಕಸಭೆಗೆ ಆಯ್ಕೆಯಾದರು. 2002ರಲ್ಲಿ ವಾಜಪೇಯಿ ಸರ್ಕಾರದಲ್ಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದರು. 2009ರಲ್ಲಿ ಸೋತರೂ ಮತ್ತೆ 2014ರಲ್ಲಿ ಸಂಸದರಾದರು. ಕೆಲಕಾಲ ವಿದೇಶಾಂಗ ಖಾತೆಯ ರಾಜ್ಯ ಸಚಿವರಾದರು.

ವಿನೋದ್‌ ಖನ್ನಾ ಪೆಶಾವರದಲ್ಲಿ ಹುಟ್ಟಿದರು. ದೇಶವಿಭಜನೆಯಾದಾಗ ಹೆತ್ತವರ ಜತೆ ಮುಂಬೈಗೆ ವಲಸೆ. ಬೆಳೆದದ್ದೆಲ್ಲ ಮುಂಬೈಯಲ್ಲೇ. ಓಶೊ ರಜನೀಶ್‌ ಬೆನ್ನು ಹತ್ತಿ ದೇಶ ಬಿಟ್ಟ ಬಳಿಕ ಮೊದಲ ಪತ್ನಿ ಗೀತಾಂಜಲಿ ಡೈವೋರ್ಸ್‌ ನೀಡಿದರು. ಅವರ ಇಬ್ಬರು ಮಕ್ಕಳು ರಾಹುಲ್‌ ಖನ್ನಾ ಮತ್ತು ಅಕ್ಷಯ ಖನ್ನಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮರಳಿ ಭಾರತಕ್ಕೆ ಬಂದ ಬಳಿಕ ಮದುವೆಯಾದ ಕವಿತಾ ಅವರಿಗೂ ಇಬ್ಬರು ಮಕ್ಕಳು. ಡಜನ್‌ಗೂ ಹೆಚ್ಚು ಹೀರೋಯಿನ್‌ಗಳ ಜತೆಗೆ ಸಿನಿಮಾದಲ್ಲಿ ನಟಿಸಿದರೂ ವಿನೋದ್ ಖನ್ನಾ ‘ಜಂಟಲ್‌ಮ್ಯಾನ್‌’ ಎಂದೇ ಹೆಸರುವಾಸಿಯಾದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.