ADVERTISEMENT

ಹಾಜಿ ಅಲಿ ದರ್ಗಾ ಇನ್ನು ಮಹಿಳೆಯರಿಗೆ ಮುಕ್ತ

ಮೂಲಸೌಕರ್ಯ ಕಲ್ಪಿಸಲು 4 ವಾರ ಕಾಲಾವಕಾಶ ಕೋರಿಕೆ

ಪಿಟಿಐ
Published 24 ಅಕ್ಟೋಬರ್ 2016, 19:38 IST
Last Updated 24 ಅಕ್ಟೋಬರ್ 2016, 19:38 IST
ಮುಂಬೈನಲ್ಲಿರುವ ಹಾಜಿ ಅಲಿ ದರ್ಗಾ
ಮುಂಬೈನಲ್ಲಿರುವ ಹಾಜಿ ಅಲಿ ದರ್ಗಾ   

ನವದೆಹಲಿ : ಮುಂಬೈನ ಐತಿಹಾಸಿಕ ಹಾಜಿ ಅಲಿ ದರ್ಗಾದಲ್ಲಿನ ಸಮಾಧಿ ಇರುವ ಸ್ಥಳಕ್ಕೆ ಪುರುಷರಿಗೆ ಪ್ರವೇಶ ಇರುವ ಮಾದರಿಯಲ್ಲೇ, ಮಹಿಳೆಯರಿಗೂ ಪ್ರವೇಶ ಕಲ್ಪಿಸಲಾಗುವುದು ಎಂದು ದರ್ಗಾ ಟ್ರಸ್ಟ್‌ ಸುಪ್ರೀಂ ಕೋರ್ಟ್‌ಗೆ ಸೋಮವಾರ ವಾಗ್ದಾನ ನೀಡಿತು.

ಮಹಿಳೆಯರಿಗೆ ಪ್ರವೇಶ ನೀಡಲು ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಲು ನಾಲ್ಕು ವಾರ ಕಾಲಾವಕಾಶ ನೀಡಬೇಕು ಎಂದು ಟ್ರಸ್ಟ್‌ ಕೋರಿತು. ಈ ಮನವಿಗೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್‌ ಮತ್ತು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಎಲ್‌. ನಾಗೇಶ್ವರ ರಾವ್ ಅವರಿದ್ದ ನ್ಯಾಯಪೀಠ ಸಮ್ಮತಿಸಿತು.

ಟ್ರಸ್ಟ್‌ ಪರ ಹಾಜರಾದ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂ, ದರ್ಗಾದಲ್ಲಿನ ಸಮಾಧಿ ಇರುವ ಸ್ಥಳಕ್ಕೆ ಮಹಿಳೆಯರಿಗೂ ಪ್ರವೇಶ ನೀಡಲು ಒಪ್ಪಿಗೆ ಇದೆ ಎಂಬ ಪ್ರಮಾಣಪತ್ರವನ್ನು ಸಲ್ಲಿಸಲಾಗಿದೆ ಎಂದು ಪೀಠಕ್ಕೆ ವಿವರಣೆ ನೀಡಿದರು.

ಮೇಲ್ಮನವಿ ಸಲ್ಲಿಸಿದ್ದ ದರ್ಗಾ: ಸಮಾಧಿ ಇರುವ ಸ್ಥಳಕ್ಕೆ ಮಹಿಳೆಯರಿಗೂ ಪ್ರವೇಶ ಕಲ್ಪಿಸಬೇಕು ಎಂದು ಬಾಂಬೆ ಹೈ ಕೋರ್ಟ್‌ ಆದೇಶ ನೀಡಿತ್ತು. ಆದರೆ ಈ ಆದೇಶ ಪ್ರಶ್ನಿಸಿ ದರ್ಗಾ ಟ್ರಸ್ಟ್‌, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಸಂದರ್ಭದಲ್ಲಿ, ಬಾಂಬೆ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ಜಾರಿಯಲ್ಲಿತ್ತು. ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌, ‘ದರ್ಗಾ ಟ್ರಸ್ಟ್‌ನವರು ಪ್ರಗತಿಪರವಾದ ನಿಲುವು ತಾಳುತ್ತಾರೆ ಎಂಬ ಆಶಾಭಾವ ನಮ್ಮದು’ ಎಂದು ಹೇಳಿತ್ತು.

‘ಪ್ರಗತಿಪರ ಕಾರ್ಯವೊಂದನ್ನು ಮಾಡಲಾಗುತ್ತಿದೆ. ಎಲ್ಲ ಪವಿತ್ರ ಗ್ರಂಥಗಳು ಸಮಾನತೆಯನ್ನು ಬೋಧಿಸುತ್ತವೆ’ ಎಂದು ಗೋಪಾಲ್ ಸುಬ್ರಮಣಿಯಂ ಹೇಳಿದ್ದರು.‘ಸ್ತ್ರೀ–ಪುರುಷರಿಬ್ಬರಿಗೂ ಒಂದು ಹಂತದಿಂದ ಮುಂದಕ್ಕೆ ಹೋಗಲು ಅವಕಾಶ ನೀಡುವುದಿಲ್ಲ ಎಂದಾದರೆ ಸಮಸ್ಯೆ ಇಲ್ಲ. ಆದರೆ, ಇವರಲ್ಲಿ ಒಬ್ಬರಿಗೆ, ತುಸು ಹೆಚ್ಚು ಮುಂದೆ ಹೋಗಲು ಅವಕಾಶ ಕೊಡುತ್ತೀರಿ ಎಂದಾದರೆ, ಅದು ಸಮಸ್ಯೆಗೆ ಕಾರಣವಾಗುತ್ತದೆ’ ಎಂದು ಪೀಠ ಹೇಳಿತ್ತು.

ಕುರ್‌ಆನ್‌ನಲ್ಲಿ ಹೇಳಿದ್ದರೆ ಮಾತ್ರ ದರ್ಗಾದಲ್ಲಿನ ಸಮಾಧಿ ಇರುವ ಜಾಗಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಬೇಕು. ಕುರ್‌ಆನ್‌ನಲ್ಲಿ ಹೇಳಿಲ್ಲದಿದ್ದರೆ, ಮಹಿಳೆಯರ ಪ ೇಶ ನಿಷೇಧಿಸಬಾರದು ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ನಲ್ಲಿ ಹೇಳಿತ್ತು.

ವಿಚಾರಣೆಯಲ್ಲಿ ಶಬರಿಮಲೆ ಅರ್ಜಿ: ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ಹೇರಿರುವ ನಿಷೇಧ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದ ಎದುರು ವಿಚಾರಣೆಯ ಹಂತದಲ್ಲಿದೆ.

‘ದೇವರನ್ನು ಪೂಜಿಸುವ ಹಕ್ಕು ಎಲ್ಲರಿಗೂ ಇದೆ. ದೇವರು ಸರ್ವಾಂತರ್ಯಾಮಿ ಆದರೂ, ಮನುಷ್ಯ ದೇವರಿಗೆ ಮೂರ್ತಿಯ ರೂಪ ನೀಡಿದ್ದಾನೆ. ನೀನು ಹೆಣ್ಣು, ನೀನು ದೇವರನ್ನು ಪೂಜಿಸುವಂತಿಲ್ಲ ಎನ್ನಲು ಸಾಧ್ಯವೇ? ಈ ಪ್ರಕರಣದಲ್ಲಿ ಲಿಂಗ ಸಮಾನತೆ ಆಪತ್ತಿನಲ್ಲಿದೆ’ ಎಂದು ಅರ್ಜಿಯ ವಿಚಾರಣೆ ವೇಳೆ ಪೀಠ ಮೌಖಿಕವಾಗಿ ಹೇಳಿತ್ತು.

ಈ ಅರ್ಜಿಯ ವಿಚಾರಣೆ ನವೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಿರುವುದನ್ನು ಸಮರ್ಥಿಸಿ ಕೇರಳದ ಎಡರಂಗ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿಕೆ ಸಲ್ಲಿಸಿದೆ.

ಮಹಿಳೆಯರ ಜಯ: ತೃಪ್ತಿ ದೇಸಾಯಿ
ಪುಣೆ (ಪಿಟಿಐ):
ಸಮಾಧಿ ಇರುವ ಸ್ಥಳ ಪ್ರವೇಶಿಸಲು ಮಹಿಳೆಯರಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಹಾಜಿ ಅಲಿ ದರ್ಗಾ ಟ್ರಸ್ಟ್‌ ಹೇಳಿರುವುದನ್ನು ಸ್ವಾಗತಿಸಿದ ಮಹಿಳಾ ಪರ ಕಾರ್ಯಕರ್ತೆ ತೃಪ್ತಿ ದೇಸಾಯಿ, ‘ಇದು ಮಹಿಳೆಯರ ಹಾಗೂ ದೇಶದ ಸಂವಿಧಾನದ ಜಯ’ ಎಂದು ಬಣ್ಣಿಸಿದರು.

ಭೂಮಾತಾ ರಣರಾಗಿಣಿ ಬ್ರಿಗೇಡ್‌ನ ಮುಖ್ಯಸ್ಥರಾಗಿರುವ ತೃಪ್ತಿ ಅವರು ಬೇರೆ ಬೇರೆ ಧಾರ್ಮಿಕ ಕೇಂದ್ರಗಳಲ್ಲಿ ಚಾಲ್ತಿಯಲ್ಲಿರುವ ಲಿಂಗ ಆಧರಿತ ತಾರತಮ್ಯದ ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ.

‘ಸುಪ್ರೀಂ ಕೋರ್ಟ್‌ ಹಾಗೂ ಮಹಿಳಾ ಸಂಘಟನೆಗಳ ಒತ್ತಾಯದ ಕಾರಣದಿಂದ ದರ್ಗಾ ಟ್ರಸ್ಟ್‌ನವರು ಇಂಥದ್ದೊಂದು ನಿರ್ಣಯ ಕೈಗೊಳ್ಳಬೇಕಾಯಿತು’ ಎಂದು ತೃಪ್ತಿ ಅಭಿಪ್ರಾಯಪಟ್ಟರು.ದರ್ಗಾದ ಟ್ರಸ್ಟ್‌ನವರು ಕೈಗೊಂಡ ನಿಲುವಿನ ಮಾದರಿಯಲ್ಲೇ ಶಬರಿಮಲೆ ದೇವಸ್ಥಾನದ ಪ್ರಮುಖರೂ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸುಪ್ರೀಂ ಕೋರ್ಟ್‌ ಆದೇಶದ ಪ್ರತಿ ದೊರೆತ ನಂತರ, ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದಾಗಿ ಅವರು ಹೇಳಿದರು.

ಬಾಂಬೆ ಹೈಕೋರ್ಟ್‌ ತೀರ್ಪಿನಲ್ಲಿ ಹೇಳಿದ್ದು...
* ಸಮಾಧಿ ಇರುವ ಸ್ಥಳಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವುದು ಸಮಾನತೆ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಆಶಯಗಳಿಗೆ ವಿರುದ್ಧ.

* ಸಮಾಧಿ ಇರುವ ಸ್ಥಳಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕು.

* ಮಹಿಳೆಯರ ಪ್ರವೇಶ ನಿಷೇಧಿಸಿರುವುದು ಏಕೆ ಎಂಬುದನ್ನು ಕಾನೂನಿನ ದೃಷ್ಟಿಯಿಂದ ಅಥವಾ ಇತರ ನೆಲೆಗಳಲ್ಲಿ ಸಮರ್ಥಿಸಲು ದರ್ಗಾ ಟ್ರಸ್ಟ್‌ಗೆ ಸಾಧ್ಯವಾಗಿಲ್ಲ.

* ಮಹಿಳೆಯರಿಗೆ ಪ್ರವೇಶ ನಿರಾಕರಿಸಿರುವುದು ಇಸ್ಲಾಂನ ಅವಿಭಾಜ್ಯ ಅಂಗ ಎನ್ನಲಾಗದು.

* ಮಹಿಳೆಯರಿಗೆ ಪ್ರವೇಶ ಕಲ್ಪಿಸುವುದರಿಂದ ಧರ್ಮ ಅಥವಾ ನಂಬಿಕೆಯಲ್ಲಿ ಮೂಲಭೂತ ಬದಲಾವಣೆ ಆಗುವುದಿಲ್ಲ.

* ಪ್ರಾರ್ಥನಾ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಆಗುವುದನ್ನು ತಪ್ಪಿಸಲು ಅವರ ಪ್ರವೇಶ ನಿರ್ಬಂಧಿಸಲಾಗಿದೆ ಎಂಬ ವಾದ ಒಪ್ಪಲಾಗದು.

(ಮಹಿಳೆಯರಿಗೆ ಪ್ರವೇಶ ಬೇಕು ಎಂಬ ಅರ್ಜಿಯನ್ನು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಸದಸ್ಯರಾದ ಖಾಜಿಯಾ ಸೋಮನ್ ಮತ್ತು ನೂರ್‌ಜೆಹಾನ್‌ ನಿಯಾಜ್‌ ಸಲ್ಲಿಸಿದ್ದರು.)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.