ADVERTISEMENT

ಹೇಳಿಕೆಗೆ ಬದ್ಧ: ಅಮೀರ್‌

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 20:15 IST
Last Updated 25 ನವೆಂಬರ್ 2015, 20:15 IST

ಮುಂಬೈ (ಪಿಟಿಐ): ‘ಅಸಹಿಷ್ಣುತೆ’ ಕುರಿತು ನೀಡಿದ್ದ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದಿರುವ ಬಾಲಿವುಡ್‌ ನಟ ಅಮೀರ್‌ ಖಾನ್‌, ‘ದೇಶ ತೊರೆಯುವ ಉದ್ದೇಶವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಭಾರತೀಯನಾಗಿರುವುದಕ್ಕೆ ಹೆಮ್ಮೆಯಿದೆ. ನನಗಾಗಲಿ, ನನ್ನ ಪತ್ನಿಗಾಗಲಿ ದೇಶ ಬಿಟ್ಟು ಹೋಗುವ ಯಾವುದೇ ಉದ್ದೇಶವಿಲ್ಲ’ ಎಂದು ಅಮೀರ್‌ ಖಾನ್‌ ಬುಧವಾರ ಹೇಳಿಕೆ ನೀಡಿದ್ದಾರೆ.

‘ಅಸಹಿಷ್ಣುತೆ ಹೆಚ್ಚುತ್ತಿರುವ ಬಗ್ಗೆ ಪತ್ನಿ ಕಿರಣ್‌ ರಾವ್‌ ಆತಂಕಕ್ಕೆ ಒಳಗಾಗಿದ್ದಳು. ಕುಟುಂಬ ಸಮೇತ ದೇಶ ಬಿಟ್ಟು ಹೋಗಬೇಕೆ ಎಂದು ಪ್ರಶ್ನಿಸಿದ್ದಳು. ಆಕೆ, ತನ್ನ ಮಗನ ಸುರಕ್ಷತೆಯ ಬಗ್ಗೆ ಆತಂಕಕ್ಕೆ ಒಳಗಾಗಿದ್ದಳು. ಭವಿಷ್ಯದಲ್ಲಿ ನಮ್ಮ ಸಮಾಜ ಹೇಗಿರುತ್ತದೆ ಎಂದು ಪ್ರಶ್ನಿಸಿದ್ದಳು’ ಎಂದು ಅಮೀರ್‌ ಸೋಮವಾರ ಸಂದರ್ಶನದಲ್ಲಿ ಹೇಳಿದ್ದರು.

ಇದಕ್ಕೆ ವ್ಯಾಪಕ ಟೀಕೆ  ವ್ಯಕ್ತವಾಗಿರುವ ಕಾರಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಎರಡು ದಿನಗಳಿಂದ ನಡೆಯುತ್ತಿರುವ ಚರ್ಚೆಯ ಕಾವು ತಗ್ಗಿಸಲು ಪ್ರಯತ್ನಿಸಿದ್ದಾರೆ.

‘ನಾನು ಮತ್ತು ಕಿರಣ್‌ ಇಲ್ಲಿಯೇ ಹುಟ್ಟಿ ಬೆಳೆದಿದ್ದೇವೆ. ನಾವು ಈ ದೇಶ ತೊರೆಯುವುದಿಲ್ಲ. ನನ್ನನ್ನು ಟೀಕಿಸುತ್ತಿರುವವರು ಒಂದೋ ಸಂದರ್ಶನವನ್ನು ನೋಡಿಲ್ಲ. ಅಥವಾ ಉದ್ದೇಶಪೂರ್ವಕವಾಗಿ ನನ್ನ ಹೇಳಿಕೆಯನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ. ಈ ದೇಶವನ್ನು ನಾನು ಅತಿಯಾಗಿ ಪ್ರೀತಿಸುತ್ತೇನೆ. ಇಲ್ಲಿ ಹುಟ್ಟಿದ್ದು ನನ್ನ ಅದೃಷ್ಟ. ಇಲ್ಲಿಯೇ ಬದುಕುತ್ತೇನೆ. ಆದರೆ ಅಸಹಿಷ್ಣುತೆಗೆ ಸಂಬಂಧಿಸಿದಂತೆ ನೀಡಿದ್ದ ಹೇಳಿಕೆಗೆ ಬದ್ಧನಾಗಿದ್ದೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.