ADVERTISEMENT

‘ಅಚ್ಚೆ ದಿನ್‌ಗಳು ಎಲ್ಲಿವೆ’

ಮೋದಿಗೆ ಎಎಪಿ ಪ್ರಶ್ನೆ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಮೇ 2015, 10:03 IST
Last Updated 27 ಮೇ 2015, 10:03 IST

ನವದೆಹಲಿ (ಐಎಎನ್‌ಎಸ್‌/ ಪಿಟಿಐ): ಚುನಾವಣೆಯ ವೇಳೆ ಬಿಜೆಪಿ ನೀಡಿದ ‘ಒಳ್ಳೆಯ ದಿನಗಳ’ ಭರವಸೆಯನ್ನು ಪ್ರಧಾನಿ ನರೇಂದ್ರ  ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರವು ಈಡೇರಿಸುವ ಬದಲಾಗಿ ದೇಶವನ್ನು ‘ಹತಾಶೆ’ಯ ಕೂಪಕ್ಕೆ ದೂಡಿದೆ ಎಂದು ಆಮ್‌ ಆದ್ಮಿ ಪಕ್ಷವು ಆರೋಪಿಸಿದೆ.

ದೆಹಲಿಯ ಜಂತರ್‌ ಮಂತರ್‌ನಲ್ಲಿ ಮೋದಿ ಸರ್ಕಾರದ ಆಡಳಿತದ ವಿರೋಧಿಸಿ ಪಕ್ಷದ ದೆಹಲಿ ಘಟಕದ ಮುಖ್ಯಸ್ಥ ದಿಲೀಪ್‌ ಪಾಂಡೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಎಎಪಿ, ಬಿಜೆಪಿ ಹೇಳುತ್ತಿದ್ದ ಒಳ್ಳೆಯ ದಿನಗಳು ಎಲ್ಲಿವೆ ಎಂದು ಪ್ರಶ್ನಿಸಿದೆ.

‘ಬಿಜೆಪಿ ಹೇಳುತ್ತಿದ್ದ ಯಾವುದೇ ಒಳ್ಳೆಯ ದಿನಗಳು ನಾನು ನೋಡಿಲ್ಲ. ಸಾರ್ವಜನಿಕರ ಕಲ್ಯಾಣಕ್ಕಾಗಿ ಮೋದಿ ಅವರ ಸರ್ಕಾರ ನೀಡಿದ್ದ ಆಶ್ವಾಸನೆಗಳು ಏನಾದವು. ಜನತೆಗೆ ಇದೀಗ ಉತ್ತರ ಬೇಕಿದೆ’ ಎಂದು ಪಾಂಡೆ ಅವರು ಕಟುಕಿಯಾಡಿದರು.

ಇನ್ನು, ಪ್ರತಿಭಟನಾಕಾರರನ್ನು ಉದ್ದೇಶಿ ಮಾತನಾಡಿದ ಕರವಾಲ್‌ ನಗರ ಶಾಸಕ ಹಾಗೂ ಎಎಪಿ ವಕ್ತಾರ ಕಪಿಲ್ ಮಿಶ್ರಾ, ‘ಮೋದಿ ಅವರ ನೇತೃತ್ವದ ಸರ್ಕಾರ ಕಳೆದೊಂದು ವರ್ಷದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಒಂದೇ ಒಂದು ಭರವಸೆಯನ್ನು ಈಡೇರಿಸಲು ಅದಕ್ಕೆ ಸಾಧ್ಯವಾಗಿಲ್ಲ. ಪ್ರಧಾನಿ ಎಲ್ಲಿದ್ದಾರೆ ಅಥವಾ ಅವರ ಸಂಪುಟದ ಸಚಿವರು ಎಲ್ಲಿದ್ದಾರೆ ಎಂದು ಜನತೆ ಪ್ರಶ್ನಿಸುತ್ತಿದೆ’ ಎಂದು ಟೀಕಿಸಿದ್ದಾರೆ.

ಒಳ್ಳೆಯ ದಿನಗಳ ತಿಥಿ:
ಪ್ರತಿಭಟನಾ ನಿರತ ಎಎಪಿ ಕಾರ್ಯಕರ್ತರು, ‘ಒಳ್ಳೆದಿನಗಳ ಪುಣ್ಯತಿಥಿ, ಮಧ್ಯಮ ವರ್ಗ ವಿರೋಧಿ ಮೋದಿ ಸರ್ಕಾರ,  ರೈತ ವಿರೋಧಿ ಮೋದಿ ಸರ್ಕಾರ’ ಬಿತ್ತಿ ಫಲಕಗಳನ್ನು ಹಿಡಿದಿರುವುದು ಕಂಡು ಬಂತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.