ADVERTISEMENT

‘ಅನುಮೋದನೆಗಾಗಿ ರಾಜ್ಯಗಳಿಗೆ ಪತ್ರ’

ನ್ಯಾಯಾಂಗ ನೇಮಕಾತಿ ಆಯೋಗ ಮಸೂದೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2014, 19:30 IST
Last Updated 19 ನವೆಂಬರ್ 2014, 19:30 IST

ನವದೆಹಲಿ: ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರನ್ನು ನ್ಯಾಯಾ­ಧೀಶರ ಸಮಿತಿ (ಕೊಲಿಜಿಯಂ) ನೇಮಕ ಮಾಡುವ ವ್ಯವಸ್ಥೆ ಬದಿಗೊತ್ತುವ ‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಮಸೂದೆ’ಗೆ ಅನುಮೋದನೆ ನೀಡುವಂತೆ ರಾಜ್ಯಗಳಿಗೆ ಪತ್ರ ಬರೆಯ­ಲಾಗಿದೆ ಎಂದು ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಮಸೂದೆ ಸಂವಿಧಾನ ತಿದ್ದುಪಡಿ ಮಸೂದೆ ಆಗಿರುವುದರಿಂದ ಶೇ 50ರಷ್ಟು ರಾಜ್ಯಗಳ ಅನುಮೋದನೆ ಅಗತ್ಯವಾಗಿದ್ದು, ರಾಜಸ್ತಾನ, ಗೋವಾ ಮತ್ತು ತ್ರಿಪುರಾ ಶಾಸನ ಸಭೆಗಳು ಈಗಾಗಲೇ ಒಪ್ಪಿಗೆ ನೀಡಿವೆ. ಗುಜ­ರಾತ್‌ ವಿಧಾನ­ಸಭೆಯೂ ತಿದ್ದುಪಡಿಗೆ ಅನುಮತಿ ನೀಡಿದೆ ಎಂದು ಮಾಧ್ಯಮ­­­ಗಳಲ್ಲಿ ವರದಿ ಪ್ರಕಟವಾಗಿದೆ ಎಂದು ಸದಾನಂದಗೌಡ ಬುಧವಾರ ಪತ್ರಿಕಾ ಗೋಷ್ಠಿ-­ಯಲ್ಲಿ ತಿಳಿಸಿದರು.

ಸದ್ಯದಲ್ಲೇ ವಿಧಾನ­ಮಂಡಲ­ಗಳ ಚಳಿಗಾಲ ಅಧಿವೇಶನ ಆರಂಭವಾ­ಗಲಿದ್ದು, ಅನೇಕ ರಾಜ್ಯಗಳು ಅನು­ಮೋದನೆ ನೀಡುವ ಸಾಧ್ಯತೆಯಿದೆ. ಮಸೂದೆ ಬೆಂಬಲಿಸುವಂತೆ ಮುಖ್ಯ­ಮಂತ್ರಿ­ಗಳಿಗೆ ಪತ್ರ ಬರೆಯಲಾಗಿದೆ. ರಾಜ್ಯಗಳ ಅನುಮತಿ ಬಳಿಕ ಮಸೂದೆ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಹೋಗ­ಲಿದೆ.

ಎರಡು ದಶಕದ ಹಿಂದೆ ಜಾರಿಗೆ ಬಂದಿರುವ ಕೊಲಿಜಿಯಂ ವ್ಯವಸ್ಥೆ ಕುರಿತು ತೀವ್ರ ಟೀಕೆಗಳು ವ್ಯಕ್ತವಾದ ಕಾರಣ ನ್ಯಾಯಾಂಗ ನೇಮಕಾತಿ ಆಯೋಗ ರಚಿಸಲು ಉದ್ದೇಶಿಸ­ಲಾಗಿದೆ. ಈ ಮಸೂದೆಯನ್ನು ಆಗಸ್ಟ್‌ನಲ್ಲಿ ಸಂಸತ್‌ ಅಂಗೀಕರಿಸಿದೆ.  ನ್ಯಾಯಾಂಗ ನೇಮಕಾತಿ ಆಯೋಗ ಅಸ್ತಿತ್ವಕ್ಕೆ ಬಂದರೆ ಎಲ್ಲ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆ ಅದರ ವ್ಯಾಪ್ತಿಗೆ ಬರಲಿದೆ.

ನ್ಯಾಯಾಂಗ ನೇಮಕಾತಿ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿ ಮುಖ್ಯಸ್ಥರಾಗಿ­ರುತ್ತಾರೆ. ಇಬ್ಬರು ಹಿರಿಯ ನ್ಯಾಯ­ಮೂರ್ತಿಗಳು, ಇಬ್ಬರು ಗಣ್ಯ ವ್ಯಕ್ತಿಗಳು ಹಾಗೂ ಕಾನೂನು ಸಚಿವರು ಸದಸ್ಯರಾಗಿ­ರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.