ADVERTISEMENT

‘ದಾವೂದ್‌ ಆಫ್ಘಾನ್ ಗಡಿಯಲ್ಲಿದ್ದಾನೆ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2014, 13:45 IST
Last Updated 22 ನವೆಂಬರ್ 2014, 13:45 IST

ನವದೆಹಲಿ (ಪಿಟಿಐ): ಭಾರತದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನ ಒತ್ತಾಸೆ ನೀಡುತ್ತಿದೆ ಎಂದು ದೂರಿರುವ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್, ನೆರೆ ರಾಷ್ಟ್ರವು ದಾವೂದ್ ಇಬ್ರಾಹಿಂಗೆ ಆಶ್ರಯ ನೀಡಿದೆ. ಆತ ಪಾಕಿಸ್ತಾನ–ಆಫ್ಘಾನಿಸ್ತಾನ ಗಡಿಯಲ್ಲಿ ನೆಲೆಸಿದ್ದಾನೆ ಎಂದು ಶನಿವಾರ ಆರೋಪಿಸಿದ್ದಾರೆ.

ಅಲ್ಲದೇ, ಭಾರತವು ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧ ಬಯಸುತ್ತಿದೆ. ಆದರೆ ನವದೆಹಲಿಯೊಂದಿಗೆ ಸ್ನೇಹಯುತ ಸಂಬಂಧ ಹೊಂದಲು ಪಾಕಿಸ್ತಾನವು ಉತ್ಸುಕವಾಗಿರುವಂತೆ ಕಾಣಿಸುತ್ತಿಲ್ಲ ಎಂದೂ ಅವರು ಕುಟುಕಿದ್ದಾರೆ.

ಹಿಂದೂಸ್ತಾನ್‌ ಟೈಮ್ಸ್‌ ನಾಯಕತ್ವ ಸಮಾವೇಶದಲ್ಲಿ ಮಾತನಾಡಿದ ಸಿಂಗ್‌ ಅವರು,‘ಭಾರತದಲ್ಲಿನ ಭಯೋತ್ಪಾದನೆ ಸಂಪೂರ್ಣವಾಗಿ ಪಾಕಿಸ್ತಾನ ಪ್ರಯೋಜಿತವಾದದ್ದು. ತಮ್ಮ ದೇಶದವರಾರೂ ಭಯೋತ್ಪಾದನೆಯಲ್ಲಿ ತೊಡಗಿಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ. ಆದರೆ ಭಯೋತ್ಪಾದಕರಿಗೆ ನೆರವು ನೀಡುತ್ತಿರುವ ಐಎಸ್‌ಐ ಅವರ ದೇಶದಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಇದೇ ವೇಳೆ, 2008ರ ಮುಂಬೈನಲ್ಲಿ ನಡೆದ ಉಗ್ರರ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಶಿಕ್ಷಿಸಲು ಪಾಕಿಸ್ತಾನ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ತನಿಖೆ ಆಮೆಗತಿಯಲ್ಲಿ ಸಾಗುತ್ತಿದೆ ಎಂದಿರುವ ಅವರು, ‘ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪಾಕಿಸ್ತಾನವು ನೆರವು ನೀಡುತ್ತಿಲ್ಲ. ನಿಜವಾಗಿ ನೋಡಿದರೆ ಅದು ಪ್ರಕರಣದಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.