ADVERTISEMENT

‘ನಮಸ್ತೆ’ ಎಂದ ಬರಾಕ್‌ ಒಬಾಮ

​ಪ್ರಜಾವಾಣಿ ವಾರ್ತೆ
Published 25 ಜನವರಿ 2015, 19:30 IST
Last Updated 25 ಜನವರಿ 2015, 19:30 IST

ನವದೆಹಲಿ (ಐಎಎನ್ಎಸ್‌):  ಇದೇ ಮೊದಲ ಬಾರಿಗೆ ಗಣ­ರಾ­ಜ್ಯೋ­ತ್ಸವ­ದಲ್ಲಿ ಪಾಲ್ಗೊಳ್ಳಲು ಭಾನು­ವಾರ ಇಲ್ಲಿಗೆ ಆಗಮಿಸಿದ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ಅಭೂತ­ಪೂರ್ವ ಸ್ವಾಗತ ದೊರೆಯಿತು.

ಕಡುಗಪ್ಪು ಕಾರು ‘ಬೀಸ್ಟ್’ನಲ್ಲಿ ರಾಷ್ಟ್ರಪತಿ ಭವನಕ್ಕೆ ಬಂದಿಳಿದ ಒಬಾಮ ಅವರಿಗೆ ರತ್ನಗಂಬಳಿಯ ಸ್ವಾಗತ ದೊರೆಯಿತು. ಅಲ್ಲಿ ಅದಾಗಲೇ ಅವರಿಗಾಗಿ ಕಾದಿದ್ದ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ  ಒಬಾಮ ಅವರನ್ನು ಆತ್ಮೀಯವಾಗಿ ಬರಮಾಡಿ­ಕೊಂಡರು.

ನಿಗದಿಗಿಂತ 15 ನಿಮಿಷ ತಡವಾಗಿ ಆಗಮಿಸಿದ ಒಬಾಮ ಅವರಿಗೆ ವಿಂಗ್‌ ಕಮಾಂಡರ್‌ ಪೂಜಾ ಠಾಕೂರ್‌ ನೇತೃತ್ವದಲ್ಲಿ ಮೂರು ಪಡೆಗಳು ಗೌರವ ವಂದನೆ ಸಲ್ಲಿಸಿದವು.

ಮಹಿಳೆ­ಯೊಬ್ಬ­ರಿಗೆ ಮೂರು ಪಡೆಗಳ ನೇತೃತ್ವ­ ವಹಿಸುವ ಗೌರವ ದೊರೆತಿರುವುದು ಇದೇ ಮೊದಲ ಬಾರಿ. ನಂತರ 21 ಕುಶಾಲ­ತೋಪು­ಗಳನ್ನು ಸಿಡಿಸಿ ಗೌರವ ಸಲ್ಲಿಸಲಾಯಿತು. ಸೇನಾ ವಾದ್ಯತಂಡ  ಅಮೆರಿಕಹಾಗೂ ಭಾರತದ ರಾಷ್ಟ್ರಗೀತೆಯನ್ನು ಸುಶ್ರಾವ್ಯ­ವಾಗಿ ನುಡಿಸಿತು.

ಪ್ರಣವ್‌ ಮುಖರ್ಜಿ ಹಾಗೂ ಕಡುಗಪ್ಪು ಬಂದ್‌ಗಲಾ ಕೋಟು ಧರಿಸಿದ್ದರೆ, ಪ್ರಧಾನಿ ಮೋದಿ  ಕುರ್ತಾ ಪೈಜಾಮಾ ನೆಹರೂ ಜಾಕೆಟ್ ಧರಿಸಿ, ಮೇಲೆ ಕೆಂಪು ಶಾಲು ಹೊದ್ದಿದ್ದರು. ನಂತರ ಉಡುಪು ಬದಲಿಸಿದ ಮೋದಿ ಕೂಡ ಕಪ್ಪು ಬಂದ್‌ಗಲಾ ಕೋಟು ಧರಿಸಿದರು.

ಮೋದಿ  ತಮ್ಮ ಸಂಪುಟದ ಸದಸ್ಯರನ್ನು ಒಬಾಮ ಅವರಿಗೆ ಪರಿಚಯಿಸಿದರು. ಅಚ್ಚ ಭಾರತೀಯ ಶೈಲಿಯಲ್ಲಿ ಒಬಾಮ ಎರಡೂ ಕೈಮುಗಿದು ‘ನಮಸ್ತೆ’ ಎಂದರು. ತಮಗೆ ದೊರೆತ ಅಭೂತಪೂರ್ವ ಆತಿಥ್ಯಕ್ಕೆ ಮನಸೋತ ಒಬಾಮ ಕೃತಜ್ಞತೆ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.