ADVERTISEMENT

‘ಬಿಜೆಪಿ ನಾಯಕರು ಕಂಗೆಟ ಇಲಿಗಳು’

ಪತಿ ವಿರುದ್ಧದ ಟೀಕೆಗೆ ಪ್ರಿಯಾಂಕಾ ತಿರುಗುಬಾಣ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2014, 6:21 IST
Last Updated 28 ಏಪ್ರಿಲ್ 2014, 6:21 IST

ನವದೆಹಲಿ/ರಾಯ್‌ಬರೇಲಿ (ಪಿಟಿಐ): ಗಾಂಧಿ ಕುಟುಂಬ ಹಾಗೂ ಬಿಜೆಪಿ ನಡುವಣ ವಾಗ್ಯುದ್ಧ ತಾರಕಕ್ಕೆ ಏರಿದ್ದು, ಸೋನಿಯಾ ಗಾಂಧಿ, ರಾಹುಲ್‌  ಕೃಪಾ­ಕಟಾಕ್ಷ­ದಿಂದಲೇ ರಾಬರ್ಟ್‌ ವಾಧ್ರಾ ದೊಡ್ಡ ಸಾಮಾಜ್ರ್ಯವನ್ನೇ ಕಟ್ಟಿ­ದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಇದಕ್ಕೆ ದಿಟ್ಟ ಉತ್ತರ ನೀಡಿರುವ ಪ್ರಿಯಾಂಕಾ ವಾಧ್ರಾ, ತಮ್ಮ ಪತಿ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರನ್ನು ಭೀತಿಯಿಂದ ದಿಕ್ಕಾ­ಪಾ­ಲಾಗಿ ಓಡಾಡುವ ‘ಇಲಿ’ಗಳಿಗೆ ಹೋಲಿಸಿದ್ದಾರೆ.

ಸುಳ್ಳು ಪ್ರಚಾರಗಳಿಂದ ತಾವು ಧೃತಿಗೆಡು­ವುದಿಲ್ಲ ಹಾಗೂ ವಿಚ್ಛಿದ್ರಕಾರಿ ರಾಜಕೀಯದ ವಿರುದ್ಧ ಧ್ವನಿ ಎತ್ತುವುದಾಗಿ  ರಾಯ್‌ಬರೇಲಿಯಲ್ಲಿ ಗುಡು­ಗಿದ್ದಾರೆ. ‘ಅವರು (ಬಿಜೆಪಿ) ಮತ್ತೆ ಸುಳ್ಳಿನ ಕಂತೆ ಬಿಚ್ಚು­ತ್ತಾರೆ ಎನ್ನುವುದು ನನಗೆ ಗೊತ್ತು. ನಾನು ಸುಮ್ಮನಿ­ರು­ವುದಿಲ್ಲ. ಅವರು ಮತ್ತಷ್ಟು ಆರೋಪ ಮಾಡಲಿ ಎಂದು ಕಾಯು­ತ್ತಿದ್ದೇನೆ’ ಎಂದೂ ಪ್ರಿಯಾಂಕಾ ಸವಾಲು ಹಾಕಿದ್ದಾರೆ.

ಗುಜರಾತ್‌ ಮಾದರಿ ಟೀಕಿಸುವ ಮೂಲಕ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸೋನಿಯಾ ಕುಟುಂಬದವರನ್ನು ಹಣಿಯಲು,  ರಾಬರ್ಟ್‌ ವಾಧ್ರಾ ಭಾಗಿಯಾಗಿ­ದ್ದರೆಂದು ಆರೋಪಿಸಲಾದ ಭೂ ಅವ್ಯವ­ಹಾರದ  ಕುರಿತ ಕಿರುಚಿತ್ರ ಮತ್ತು ಕಿರುಹೊತ್ತಿಗೆಯನ್ನು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದೆ.

ಕಿರುಹೊತ್ತಿಗೆಯಲ್ಲಿ ಏನಿದೆ?: ‘ದಾಮಾದ್‌ ಶ್ರೀ’ (ಅಳಿಯ) ಎಂದು ಹೆಸರಿಸಲಾದ ಕಿರುಹೊತ್ತಿಗೆಯಲ್ಲಿ ವಾಧ್ರಾ ಅವರು ರಾಜಸ್ತಾನ ಮತ್ತು

ಹರಿಯಾಣದಲ್ಲಿ ನಡೆಸಿದ್ದಾರೆ ಎನ್ನಲಾದ ಭೂ  ಅವ್ಯವಹಾರಗಳನ್ನು ಪಟ್ಟಿ ಮಾಡಿರುವ ಬಿಜೆಪಿ, ‘ಇದು ವಾಧ್ರಾ ಮಾದರಿ ಅಭಿವೃದ್ಧಿ’ ಎಂದು ವ್ಯಂಗ್ಯವಾಡಿದೆ.

ಎಂಟು ನಿಮಿಷಗಳ ಕಿರುಚಿತ್ರದ ವಿಡಿಯೊದಲ್ಲಿ ವಾಧ್ರಾ ತಮ್ಮ ವ್ಯವಹಾ­ರಗ-­ಳನ್ನು ವೃದ್ಧಿಸಿಕೊಳ್ಳಲು ಗಾಂಧಿ ಕುಟುಂಬದ ಪ್ರಭಾವ­ವನ್ನು ಯಾವ ರೀತಿ ಬಳಸಿಕೊಂಡರು ಎನ್ನುವುದನ್ನು ವಿವರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ವರದಿಗಾರ­ರೊಂದಿಗೆ ಮಾತನಾ­ಡಿದ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್‌,  ಹರಿ­ಯಾಣ, ರಾಜಸ್ತಾನಗಳಲ್ಲಿ ಪರಿಸರ ಮತ್ತು ಭೂ ಕಾಯ್ದೆಯ ಕಾನೂನು­ಗಳನ್ನು ಗಾಳಿಗೆ ತೂರಿ   ವಾಧ್ರಾ ಅವರು ನಡೆಸಿದ ಅವ್ಯವಹಾರಗಳಿಗೆ ಬೆಂಬಲ­ವಾಗಿ ನಿಂತರವರು ಯಾರು’ ಎಂದು  ಪ್ರಶ್ನಿಸಿದ್ದಾರೆ.



‘ವಾಧ್ರಾ ಅವರಿಗೆ ಅನುಕೂಲ ಮಾಡಿಕೊಟ್ಟ ಅಧಿಕಾರಿಗಳಿಗೆ ಹರಿ­ಯಾಣ­­ದಲ್ಲಿ ಆಯಕಟ್ಟಿನ ­ಹುದ್ದೆಗಳನ್ನು ನೀಡಲಾಗಿದೆ’ ಎಂದು ಆರೋಪಿಸಿದ್ದಾರೆ.

ಮೋದಿ ಅವರು ಗೋರಖ್‌ಪುರದ ಪ್ರಚಾರ ಸಭೆ­ಯಲ್ಲಿ ‘ಉತ್ತರ ಪ್ರದೇಶವನ್ನು ಗುಜರಾತ್‌ ರೀತಿಯಲ್ಲಿ ಅಭಿವೃದ್ಧಿ ಪಡಿಸಲು 56 ಅಂಗುಲ ವಿಸ್ತಾರದ ಹೃದಯ ಅಗತ್ಯ’ ಎಂದಿದ್ದರು. ಇದಕ್ಕೆ ಪ್ರಿಯಾಂಕಾ ತೀಕ್ಷ್ಣವಾಗಿ ಪ್ರತಿಕ್ರಿ­ಯಿಸಿ, ‘ದೇಶ ಮುನ್ನಡೆಲು 56 ಅಂಗುಲದ ಹೃದಯ ಬೇಕಿಲ್ಲ. ಹೃದಯ ವೈಶಾಲ್ಯ, ನೈತಿಕ ಸ್ಥೈರ್ಯ ಬೇಕು’ ಎಂದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.