ADVERTISEMENT

‘ಮಂಗಳಯಾನ’ ಪ್ರಥಮ ಚಿತ್ರ ಬಿಡುಗಡೆ

ಹೊಸ ಇತಿಹಾಸ ಖಚಿತಪಡಿಸಿದ ಇಸ್ರೊ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2014, 11:43 IST
Last Updated 25 ಸೆಪ್ಟೆಂಬರ್ 2014, 11:43 IST

ಬೆಂಗಳೂರು(ಪಿಟಿಐ): ‘ಮಂಗಳಯಾನ’ (ಮಾರ್ಸ್ ಆರ್ಬಿಟರ್ ಮಿಷನ್) ನೌಕೆಯಲ್ಲಿನ ವರ್ಣ ಕ್ಯಾಮೆರಾ ಸೆರೆಹಿಡಿದ ಮಂಗಳನ ಪ್ರಥಮ ಛಾಯಾಚಿತ್ರವನ್ನು ಭಾರತೀಯ ಭಾಹ್ಯಾಕಾಶ ಸಂಸೋಧನಾ ಸಂಸ್ಥೆ (ಇಸ್ರೊ) ತನ್ನ ಫೇಸ್ ಬುಕ್ ಪುಟದಲ್ಲಿ ಹಾಗೂ ಟ್ವಿಟರ್ ನಲ್ಲಿ ಗುರುವಾರ ಬಿಡುಗಡೆ ಮಾಡಿದೆ. ಇದರೊಂದಿಗೆ ಇಸ್ರೊ ತಾನು ಸೃಷ್ಟಿಸಿದ ಹೊಸ ಇತಿಹಾಸವನ್ನು ಖಚಿತಪಡಿಸಿದೆ.

‘ಈ ಛಾಯಾಚಿತ್ರವನ್ನು  7,300 ಕಿ.ಮೀ. ಎತ್ತರದಿಂದ ಸೆರೆಹಿಡಿಯಲಾಗಿದೆ. 376 ಎಂ. ರೆಸಲ್ಯೂಷನ್ ಹೊಂದಿದೆ’ ಎಂದು ಇಸ್ರೊ ಟ್ವಿಟ್ ಮಾಡಿದೆ.   

ಮಾರ್ಸ್ ಆರ್ಬಿಟರ್ ನೌಕೆಯಲ್ಲಿನ ಕ್ಯಾಮೆರಾ ಸೆರೆಹಿಡಿದ ‘ಕೆಂಪು ಗ್ರಹ’ ಮಂಗಳನ ಪ್ರಥಮ ಛಾಯಾಚಿತ್ರವನ್ನು ಇಸ್ರೊದ ಅಧ್ಯಕ್ಷ ಕೆ. ರಾಧಾಕೃಷ್ಣನ್ ಹಾಗೂ ಕಾರ್ಯದರ್ಶಿ ವಿ. ಕೋಟೇಶ್ವರ ರಾವ್ ಅವರನ್ನೊಳಗೊಂಡ ವಿಜ್ಞಾನಿಗಳ ತಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಳುಹಿಸಿಕೊಟ್ಟಿದ್ದಾಗಿ ಗುರುವಾರ ಬೆಳಿಗ್ಗೆ ಇಸ್ರೊ ಟ್ವಿಟ್ ಮಾಡಿದೆ.

‘ಪ್ರಥಮ ಛಾಯಾಚಿತ್ರ ನೋಡಿದೆ. ಉತ್ತಮವಾಗಿದೆ’ ಎಂದು ಟ್ವಿಟ್ ಮಾಡಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಸ್ರೊದ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ. 

ನರೇಂದ್ರ ಮೋದಿ ಅವರು ಬುಧವಾರವಷ್ಟೇ ಬೆಂಗಳೂರಿನ ಇಸ್ರೊ ಕೇಂದ್ರಕ್ಕೆ ಭೇಟಿ ನೀಡಿ, ಮಂಗಳಯಾನ ಯಶಸ್ವಿಗೊಳಿಸಿದ ಇಸ್ರೊದ ಅಧ್ಯಕ್ಷ ಕೆ. ರಾಧಾಕೃಷ್ಣನ್ ಹಾಗೂ ವಿಜ್ಞಾನಿಗಳ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.