ADVERTISEMENT

‘ಮಾದಕದ್ರವ್ಯ ವ್ಯಸನ: ಪಿಡುಗು’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2014, 19:30 IST
Last Updated 14 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): ಮಾದಕದ್ರವ್ಯ ವ್ಯಸನ ರಾಷ್ಟ್ರೀಯ ಪಿಡುಗು. ಇದರ ನಿರ್ಮೂಲ­ನೆ­ಗಾಗಿ ಸರ್ಕಾರ ಮತ್ತು ಸಮಾಜ ಸಂಘ­ಟಿತ ಹೋರಾಟ ನಡೆಸ­ಬೇಕು ಎಂದು   ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿ­ದರು.

ಮಾದಕದ್ರವ್ಯ ವ್ಯಸನ ಮನೋ ಸಾಮಾಜಿಕ ವೈದ್ಯಕೀಯ ಸಮಸ್ಯೆಯಾ­ಗಿದ್ದು, ಇದರ ವಿರುದ್ಧ ವ್ಯಸನಿಯ ಕುಟುಂಬ, ಮಿತ್ರರು, ಸಮಾಜ, ಸರ್ಕಾರ ವ್ಯಕ್ತಿಗತ ನೆಲೆಗಟ್ಟಿನಲ್ಲಿ ಹೋರಾಟ ನಡೆಸಿದರೆ ಉಪ­ಯೋಗ­ವಾ­­ಗದು. ಸಂಘಟಿತ ಹೋರಾಟ ನಡೆಸಬೇಕು ಎಂದು ಸಲಹೆ ಮಾಡಿದರು.

ಭಾನುವಾರ ಆಕಾಶವಾಣಿಯಲ್ಲಿ  ತಮ್ಮ ಮೂರನೇ  ‘ಮನದ ಮಾತು’ (ಮನ್‌ ಕಿ ಬಾತ್‌)  ಕಾರ್ಯಕ್ರಮದಲ್ಲಿ ರಾಷ್ಟ್ರ­ವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಮಾದಕದ್ರವ್ಯ ವ್ಯಸನ ಹಾಗೂ ದುಷ್ಪರಿಣಾಮ ಕುರಿತು ಯುವ ಜನತೆಗೆ ಮನಮುಟ್ಟುವಂತೆ ಪಾಠ ಮಾಡಿದರು. 

‘ವ್ಯಸನ ಮುಕ್ತ ಭಾರತ’ಕ್ಕಾಗಿ ಶೀಘ್ರವೇ ರಾಷ್ಟ್ರವ್ಯಾಪಿ ಆಂದೋ­ಲನ  ಆರಂ­ಭಿಸು­ವು­ದಾಗಿ ತಿಳಿಸಿದ ಅವ­ರು, ಸಿನಿಮಾ ತಾರೆಯರು, ಕ್ರೀಡಾಪಟು­ಗಳು ಹಾಗೂ ಇತರ ಕ್ಷೇತ್ರಗಳ ಗಣ್ಯರನ್ನು ಆಂದೋಲನ­ದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗು­ವುದು ಎಂದರು. 

‘ಮಾದಕ ವಸ್ತುಗಳ ಮಾರಾಟ ಜಾಲದ ಹಿಂದೆ ದೇಶದ್ರೋಹಿಗಳು ಕೆಲಸ ಮಾಡು­­­ತ್ತಿದ್ದಾರೆ. ಈ ವಸ್ತುಗಳ ಖರೀದಿಗೆ ನೀಡುವ ಹಣ ನೇರವಾಗಿ ದೇಶ­ದ್ರೋಹಿ­­ಗಳು ಮತ್ತು ಭಯೋತ್ಪಾ­ದಕರ ಕೈ ಸೇರುತ್ತದೆ. ಅದೇ ಹಣದಿಂದ ಅವರು ನಮ್ಮ ಸೈನಿಕರನ್ನು ಕೊಲ್ಲಲು ಮದ್ದುಗುಂಡು, ಬಂದೂಕು ಖರೀದಿಸು­ತ್ತಾರೆ. ಪರೋಕ್ಷವಾಗಿ ನೀವು ಭಯೋತ್ಪಾದಕರಿಗೆ ನೆರವು ನೀಡಿದಂತಾ­ಗು­ತ್ತದೆ. ಈ ಸತ್ಯವನ್ನು ಯುವ ಜನತೆ ಎಂದಿಗೂ ಮರೆಯಬಾರದು’ ‘ರಣಜಿ ಕ್ರಿಕೆಟ್‌ನಲ್ಲಿ ಮುಂಬೈನಂತಹ ಬಲಿಷ್ಠ ತಂಡವನ್ನು  ಜಮ್ಮು ಮತ್ತು ಕಾಶ್ಮೀರದಂತಹ ತಂಡ ಬಗ್ಗು ಬಡಿಯಿತು. ಭಾರತದ ಅಂಧರ ಕ್ರಿಕೆಟ್‌ ತಂಡ ವಿಶ್ವಕಪ್‌ ಹೊತ್ತು ಭಾರತಕ್ಕೆ ಬಂದಿತು. ಇವು ನಮ್ಮ ಜೀವನಕ್ಕೆ ಚೈತನ್ಯ ಹಾಗೂ ಉತ್ಸಾಹ ತುಂಬುವ ಆದರ್ಶ ನಿದರ್ಶನಗಳಾಗಬೇಕು’
– ಪ್ರಧಾನಿ ನರೇಂದ್ರ ಮೋದಿ

ADVERTISEMENT

ಈ ವ್ಯಸನದಿಂದ ಮುಕ್ತರಾಗಲು ಬಯ­ಸುವವರಿಗೆ ಅಗತ್ಯ ಮಾರ್ಗ­ದರ್ಶನ, ಆಪ್ತ ಸಮಾಲೋಚನೆ ಹಾಗೂ  ನೆರವಿನ ಹಸ್ತ ನೀಡಲು ಕೇಂದ್ರ ಸರ್ಕಾರ ಶೀಘ್ರ ಶುಲ್ಕರಹಿತ (ಟೋಲ್‌ ಫ್ರೀ) ಸಹಾಯ­ವಾ­ಣಿಯೊಂದನ್ನು ತೆರೆ­ಯ­­ಲಿದೆ.  ಸಾಮಾಜಿಕ ಜಾಲತಾಣ­ಗ­ಳಲ್ಲಿ ಕೂಡ ವಿಶೇಷ ಆಂದೋಲನ ಆರಂ­ಭಿಸ­­ಲಾಗು­ವುದು ಎಂದು ಘೋಷಿಸಿದರು. 

ಮಾದಕ ವಸ್ತುಗಳು ಸ್ವಸ್ಥ ಸಮಾಜ ಹಾಗೂ ರಾಷ್ಟ್ರಕ್ಕೆ ಅಂಟಿದ ಜಾಡ್ಯ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮಾದಕದ್ರವ್ಯ ವ್ಯಸನ ಕೆಟ್ಟದ್ದೇ ಹೊರತು ಅದರ ದಾಸನಾದ ವ್ಯಕ್ತಿ ಅಲ್ಲ ಎಂದರು.  ‘ವ್ಯಸನ ಮುಕ್ತ ಭಾರತ’ ಕನಸು ನನಸಾಗಬೇಕಾದರೆ ಮೊದಲು  ಯುವ ಜನಾಂಗ ಯೋಚನಾ ಕ್ರಮ ಬದಲಿಸಿ­ಕೊಳ್ಳ­ಬೇಕು. ಜೀವನದಲ್ಲಿ ಒಳ್ಳೆಯ ಗುರಿ, ಆದರ್ಶ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಎಂಥದ್ದೇ ಸಂದರ್ಭದಲ್ಲೂ ಮಾದಕ ವಸ್ತುಗಳಿಗೆ ಶರಣಾ­ಗುವುದಿಲ್ಲ ಎಂಬ ದೃಢ ಸಂಕಲ್ಪ ಮಾಡಬೇಕು  ಎಂದು ಮೋದಿ ಸಲಹೆ ಮಾಡಿದರು.

ಮಾದಕ ವ್ಯವಸನದಿಂದ ಹೊರ ಬರಲು ಯತ್ನಿಸುವವರಿಗೆ ಪ್ರೋತ್ಸಾಹ ನೀಡಿದರೆ ಅವರೂ ಕೂಡ ಒಳ್ಳೆಯ ಜೀವನ ನಡೆಸಬಲ್ಲರು. ಇದಕ್ಕೆ ಬಾಲಿ­ವುಡ್‌ ನಟ ಸಂಜಯ್‌ ದತ್‌ ಜೀವನ ಜೀವಂತ ನಿದರ್ಶನ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.