ADVERTISEMENT

‘ರಾಜಕೀಯ ಬಿಕ್ಕಟ್ಟು: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ತೊಡಕು’

​ಪ್ರಜಾವಾಣಿ ವಾರ್ತೆ
Published 15 ಜುಲೈ 2015, 19:31 IST
Last Updated 15 ಜುಲೈ 2015, 19:31 IST

ನವದೆಹಲಿ: ‘ಬಡತನ ತೊಲಗಿಸಲು ಕೇಂದ್ರ– ರಾಜ್ಯಗಳು ಜತೆಗೂಡಿ ಕೆಲಸ ಮಾಡಬೇಕು. ಭೂಸ್ವಾಧೀನ ಮಸೂದೆ ಸಂಬಂಧವಾಗಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿನಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ತೊಡಕಾಗಿವೆ. ಶಾಲೆ, ಕಾಲೇಜು, ಆಸ್ಪತ್ರೆ, ರಸ್ತೆ ಮತ್ತು ನೀರಾವರಿ ಯೋಜನೆಗಳಿಗೆ ಅಡ್ಡಿ ಆಗಿದೆ’ ಎಂದು  ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭೂ ಸ್ವಾಧೀನ ಮಸೂದೆ ಕುರಿತು ಚರ್ಚಿಸಲು ಬುಧವಾರ ಕರೆದಿದ್ದ ನೀತಿ ಆಯೋಗದ ಸಭೆಯಲ್ಲಿ ಮಾತನಾಡಿದ ಅವರು, ‘ಹಿಂದಿನ ಭೂಸ್ವಾಧೀನ ಕಾಯ್ದೆಯು ಅಭಿವೃದ್ಧಿಗೆ ಪೂರಕವಾಗಿಲ್ಲ ಎನ್ನುವ ಅಭಿಪ್ರಾಯಗಳು ಬಂದಿದ್ದರಿಂದಾಗಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಎನ್‌ಡಿಎ ಹೊಸದಾಗಿ ರೂಪಿಸಿರುವ ಭೂಸ್ವಾಧೀನ ಮಸೂದೆ ಸಂಸದೀಯ ಸ್ಥಾಯಿ ಸಮಿತಿ ಪರಿಶೀಲನೆಯಲ್ಲಿದೆ’ ಎಂದು ಮೋದಿ ಸ್ಪಷ್ಟಪಡಿಸಿದರು.

‘ಮುಂದಿನ ವಾರದಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವುದರಿಂದ ಮತ್ತೊಮ್ಮೆ ರಾಜ್ಯಗಳ ಸಲಹೆ ಕೇಳಲು ಈ ಸಭೆ ಕರೆಯಲಾಗಿದೆ’ ಎಂದು ಪ್ರಧಾನಿ ವಿವರಿಸಿದರು. 

‘ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ರಾಜ್ಯಗಳೂ ಭಾಗಿಯಾಗಬೇಕೆನ್ನುವುದು ನಮ್ಮ ಸರ್ಕಾರದ ನಿಲುವು. ಕೆಲ ರಾಜ್ಯಗಳ ಮುಖ್ಯಮಂತ್ರಿಗಳೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವರ್ಷದಿಂದ ಯೋಜನೆ ರೂಪಿಸುವ ಪ್ರಕ್ರಿಯೆಯಲ್ಲಿ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ನೀತಿ ಆಯೋಗದ ಉಪ ಸಮಿತಿಗಳ ನೇತೃತ್ವವನ್ನು ಮುಖ್ಯಮಂತ್ರಿಗಳು ಹೊತ್ತಿದ್ದಾರೆ’ ಎಂದೂ  ಮೋದಿ ನೆನಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.