ADVERTISEMENT

‘ರಾಷ್ಟ್ರೀಯ ಭದ್ರತೆಗೆ ಹೊಸ ಸವಾಲು’

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2014, 11:26 IST
Last Updated 29 ನವೆಂಬರ್ 2014, 11:26 IST

ಗುವಾಹಟಿ (ಪಿಟಿಐ): ‘ಸಿರಿಯಾ ಹಾಗೂ ಇರಾಕ್‌ನಿಂದ ಭಾರತಕ್ಕೆ ಮರಳುವ ಯುವಜನತೆ ರಾಷ್ಟ್ರೀಯ ಭದ್ರತೆಗೆ ಹೊಸ ಸವಾಲಾಗಿದ್ದಾರೆ’ ಎಂದು ಕೇಂದ್ರ ಗುಪ್ತಚರ ದಳದ ನಿರ್ದೇಶಕ ಆಸಿಫ್‌ ಇಬ್ರಾಹಿಂ ಕಳವಳ ವ್ಯಕ್ತಪಡಿಸಿದ್ದಾರೆ.

ಇಲ್ಲಿ ನಡೆಯುತ್ತಿರುವ ಎಲ್ಲ ರಾಜ್ಯಗಳ ಡಿಜಿ ಮತ್ತು ಐಜಿಗಳ 49ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನದ ಲಷ್ಕರ್‌ ಎ ತೊಯ್ಬಾ ಹಾಗೂ ಜೈಷ್‌ ಎ ಮಹಮ್ಮದ್‌ ಸಂಘಟನೆಗಳಿಂದ ರಾಷ್ಟ್ರದ ಭದ್ರತೆಗೆ ಬೆದರಿಕೆ ಇದ್ದೇ ಇದೆ. ಅದರ ಜತೆಗೆ ಈಗ ಸಿರಿಯಾ ಹಾಗೂ ಇರಾಕ್‌ನಿಂದ ಯುವಜನ ದೇಶಕ್ಕೆ ಮರಳುತ್ತಿರುವುದು ಕೂಡಾ ಭದ್ರತೆಗೆ ಸವಾಲಾಗಿದೆ. ಈ ಎರಡೂ ರಾಷ್ಟ್ರಗಳಲ್ಲಿ ಹಬ್ಬುತ್ತಿರುವ ಜಿಹಾದಿ ಹೋರಾಟ ಆತಂಕ ಸೃಷ್ಟಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಸಿರಿಯಾ ಹಾಗೂ ಇರಾಕ್‌್ ಭಾಗದಲ್ಲಿರುವ ಸಾಕಷ್ಟು ಭಾರತೀಯ ಯುವಜನತೆ ಐಎಸ್‌ಐಎಸ್‌ ಸಂಘಟನೆಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಹೀಗಾಗಿ ಆ ಭಾಗದಿಂದ ಭಾರತಕ್ಕೆ ಮರಳುತ್ತಿರುವ ನೂರಾರು ಯುವಜನರು ಈಗ ದೇಶದ ಭದ್ರತೆಯ ದೃಷ್ಟಿಯಿಂದ ಹೊಸ ಸವಾಲಾಗಿ ಪರಣಮಿಸಿದ್ದಾರೆ’ ಎಂದಿದ್ದಾರೆ.

ADVERTISEMENT

ಸಿರಿಯಾದಲ್ಲಿ ಐಎಸ್ಐಎಸ್‌ ಪರ ಹೋರಾಟದ ವೇಳೆ ಸಾವನ್ನಪ್ಪಿದ್ದಾನೆಂದು ನಂಬಲಾಗಿದ್ದ ಮುಂಬೈ ಬಳಿಯ ಕಲ್ಯಾಣ್‌ನ ಆರಿಫ್‌ ಮಜೀದ್‌ ಶುಕ್ರವಾರ ಮುಂಬೈಗೆ ಮರಳಿರುವ ಬೆನ್ನಲ್ಲೆ ರಾಷ್ಟ್ರೀಯ ಭದ್ರತೆಗೆ ಆತಂಕ ಎದುರಾಗಿರುವ ಬಗ್ಗೆ ಚರ್ಚೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.